ಗಾಂಧಿ ತತ್ವ ಪ್ರಚಾರಕ ಸಂಘಟನೆಗಳಿಗೆ ಸ್ವವಿಮರ್ಶೆ ಇರಲಿ: ಪ್ರೊ. ಜಿ.ವೆಂಕಟೇಶ್
ಬೆಂಗಳೂರು, ಆ.26: ಗಾಂಧಿ ತತ್ವದ ಮುಂದಿನ ಪೀಳಿಗೆಗೂ ಜೀವಂತವಾಗಿಡುವ ನಿಟ್ಟಿನಲ್ಲಿ ಗಾಂಧಿ ತತ್ವಗಳನ್ನು ಪ್ರಚಾರ ಮಾಡುವ ಸಂಘ-ಸಂಸ್ಥೆಗಳು ಪುನರ್ ವೌಲ್ಯಮಾಪನ ಮಾಡಿಕೊಳ್ಳು ವ ಅಗತ್ಯವಿದೆ ಎಂದು ಹಿರಿಯ ವಿಮರ್ಶಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಿಸಿದ್ದಾರೆ.
ಶನಿವಾರ ಗಾಂಧಿ ಸ್ಮಾರಕ ನಿಧಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸುರೇಂದ್ರ ಕೌಲಗಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 21ನೇ ಶತಮಾನದಲ್ಲಿ ಎಲ್ಲರೂ ನಾನು, ನನ್ನದು ಎಂಬುದರ ಬಗ್ಗೆ ಚಿಂತಿಸುವವರೇ ಆಗಿದ್ದಾರೆ. ಇಂತಹ ವಾತಾವರಣದಲ್ಲಿ ಗಾಂಧಿ ತತ್ವಗಳನ್ನು ಪ್ರಚಾರ ಮಾಡುವ ಸಂಘ, ಸಂಸ್ಥೆಗಳು ಪುನರ್ ವಿಮರ್ಶೆ ಮಾಡಿಕೊಳ್ಳುವ ಮೂಲಕ ಸಂದರ್ಭದಕ್ಕೆ ಅನುಗುಣವಾಗಿ ಗಾಂಧಿ ತತ್ವಗಳನ್ನು ಭಿನ್ನ, ಭಿನ್ನ ನೆಲೆಗಳಲ್ಲಿ ಪ್ರಚಾರ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಗಾಂಧಿ ತತ್ವಗಳಗಳನ್ನು ತನ್ನ ನೆಲಕ್ಕೆ ಅನುಗುಣವಾಗಿ, ವಸ್ತು ಸ್ಥಿತಿಗೆ ಅನುಗಣವಾಗಿ ಪರಿವರ್ತಿಸುವ ಅಗತ್ಯವಿದೆ. ಗಾಂಧಿ ತತ್ವಗಳು ಕೇವಲ ಒಂದು ಕಾಲಘಟಕ್ಕೆ, ಒಂದು ದೇಶಕ್ಕೆ ಸೀಮಿತವಾದದಲ್ಲ ಎಂಬುದನ್ನು ಜಗತ್ತಿನ ಅನೇಕ ಮಂದಿ ಸಮಾಜ ಸುಧಾರಕರು ಸಾಭೀತು ಪಡಿಸಿದ್ದಾರೆ. ಅಂತಹ ಸುಧಾರಕರಲ್ಲಿ ಗಾಂಧಿ ತತ್ವದ ಪ್ರಚಾರಕ ಸುರೇಂದ್ರ ಕೌಲಗಿ ಆದರ್ಶದ ಬದುಕು ನಮ್ಮೆಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.
ಸುರೇಂದ್ರ ಕೌಲಗಿ ತಮ್ಮ ಬದುಕಿನುದಕ್ಕೂ ಗಾಂಧಿ ತತ್ವಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರ ಮಾಡುವ ನಿಟಿನಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಗಾಂಧಿ ತತ್ವ ಅಂದರೆ ಕೇವಲ ವಿಚಾರಗಳ ಪ್ರಚಾರವಲ್ಲ. ಬದುಕನ್ನು ಜನಪರವಾಗಿ, ಪರಿಸರಕ್ಕೆ ಪೂರಕವಾಗಿ ರೂಪಿಸಿಕೊಳ್ಳುವುದು ಎಂಬುದನ್ನು ಪ್ರತಿಪಾಧಿಸುತ್ತಿದ್ದರು ಎಂದು ಅವರು ಸ್ಮರಿಸಿದರು.
ಗಾಂಧಿ ಭವನದ ಅಧ್ಯಕ್ಷ ಡಾ.ವೂಡೆ ಪಿ.ಕೃಷ್ಣ ಮಾತನಾಡಿ, ನಮ್ಮ ನಡುವೆಯಿಂದ ಹಿರಿಯ ಸಮಾಜ ಸುಧಾರಕರು, ಗಾಂಧಿ ವಾದಿಗಳು ಒಬ್ಬಬ್ಬರಾಗಿ ಕಣ್ಮರೆಯಾಗುತ್ತಿದ್ದಾರೆ. ಹೀಗಾಗಿ ಅವರ ಬದುಕನ್ನು ಹಾಗೂ ವಿಚಾರಗಳನ್ನು ಒಂದು ಕಡೆ ಸಂಗ್ರಹಿಸುವ ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.
ಈ ವೇಳೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಉಪಸ್ಥಿತರಿದ್ದರು.







