ಯೋಧನ ಕುಟುಂಬಕ್ಕೆ ಬಹಿಷ್ಕಾರ ಆರೋಪ: ರಕ್ಷಣೆ ನೀಡುವಂತೆ ಮನವಿ
ಬೆಂಗಳೂರು, ಆ.26: ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡದ ಕಾರಣ ತಮ್ಮ ಕುಟುಂಬವನ್ನೇ ಊರಿನಿಂದ ಬಹಿಷ್ಕಾರ ಹಾಕಿದ್ದಾರೆ. ಈ ಬಗ್ಗೆ ತಮಗೆ ರಕ್ಷಣೆ ನೀಡುವಂತೆ ಯೋಧ ವಿಠ್ಠಲ್ ಬಶೆಟ್ಟಪ್ಪ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಕೋರಿದ್ದಾರೆ.
ಶನಿವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಅದೇ ರೀತಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಠ್ಠಲ್ ಬಶೆಟ್ಟಪ್ಪ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋಟಗಟ್ಟಿ ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಮ್ಮ 1 ಎಕರೆ 8ಗುಂಟೆ ಜಮೀನು ಬಿಟ್ಟು ಕೊಡಬೇಕೆಂದು ತಂದೆ, ತಾಯಿಗೆ ಒತ್ತಡ ಹಾಕಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಊರಿನಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದರು.
ಆತಂಕದಲ್ಲಿರುವ ತಮ್ಮ ಕುಟುಂಬಕ್ಕೆ ರಕ್ಷಣೆ ಹಾಗೂ ನ್ಯಾಯ ಕೊಡಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರಬರೆಯಲಾಗಿತ್ತು.ಬಳಿಕ ಪ್ರಾರಂಭದಲ್ಲಿ ಪತ್ರಕ್ಕೆ ಸ್ಪಂದಿಸಿ ಜಿಲ್ಲಾಧಿಕರಿ ಸಂಧಾನ ಮಾಡಲು ಯತ್ನಿಸಿದ್ದರು. ಆದರೆ, ಜಿಲ್ಲಾಧಿಕಾರಿಗಳಿಗೂ ಸ್ಥಳೀಯ ಪ್ರಭಾವಿಗಳು ಒತ್ತಡ ಹಾಕಿದ್ದಾರೆ ಎಂದು ಅವರು ಆಪಾದಿಸಿದರು.
ಜಮೀನು ಸಂಬಂಧಪಟ್ಟಂತೆ ಎಲ್ಲ ದಾಖಲೆಗಳಿವೆ. ಹೀಗಾಗಿ, ರಾಜ್ಯ ಸರಕಾರ ತಪ್ಪಿತಸ್ಥರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಪೊಲೀಸ್ ಇಲಾಖೆ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಠ್ಠಲ್ ಬಶೆಟ್ಟಪ್ಪ ಒತ್ತಾಯಿಸಿದರು.







