ಡೇರಾ ಹಿಂಸಾಚಾರ:ಗೃಹಸಚಿವರಿಂದ ಹರ್ಯಾಣ,ಇತರ ರಾಜ್ಯಗಳಲ್ಲಿ ಸ್ಥಿತಿಯ ಪುನರ್‌ಪರಿಶೀಲನೆ

ಹೊಸದಿಲ್ಲಿ,ಆ.26: ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಶನಿವಾರ ಉತ್ತರ ಭಾರತದ, ನಿರ್ದಿಷ್ಟವಾಗಿ ಹರ್ಯಾಣದಲ್ಲಿನ ಭದ್ರತಾ ಸ್ಥಿತಿಯನ್ನು ಪುನರ್ ಪರಿಶೀಲಿಸಿದರು. ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಬಾಬಾ ಗುರ್ಮೀತ್‌ನನ್ನು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಶುಕ್ರವಾರ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಘೋಷಿಸಿದ ಬಳಿಕ ಹರ್ಯಾಣದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 31 ಜನರು ಬಲಿಯಾಗಿದ್ದಾರೆ.
ಪುನರ್ ಪರಿಶೀಲನಾ ಸಭೆಯಲ್ಲಿ ಹರ್ಯಾಣ, ಪಂಜಾಬ್, ಚಂಡಿಗಡ, ದಿಲ್ಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿಯ ಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳು ಸಿಂಗ್ ಅವರಿಗೆ ವಿವರವಾದ ವರದಿಗಳನ್ನು ಸಲ್ಲಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮತ್ತು ಅರೆ ಮಿಲಿಟರಿ ಪಡೆಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹಾಗೂ ಶಾಂತಿಯನ್ನು ಮರುಸ್ಥಾಪಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಸಿಂಗ್ ಅವರಿಗೆ ಮಾಹಿತಿಗಳನ್ನು ನೀಡಿದರು.
ಹಿಂಸಾಚಾರದ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್‌ಗಳ ಹಲವಾರು ಸ್ಥಳಗಳಲ್ಲಿ ಕರ್ಫ್ಯೂ ಹೇರಲಾಗಿದ್ದರೆ, ಉತ್ತರ ಪ್ರದೇಶದ ಒಂಭತ್ತು ಜಿಲ್ಲೆಗಳಲ್ಲಿ, ದಿಲ್ಲಿಯಲ್ಲಿ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಮತ್ತು ರಾಜಸ್ಥಾನದ ಒಂದು ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಹರ್ಯಾಣ, ಪಂಜಾಬ್ ಮತ್ತು ಚಂಡಿಗಡಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಸ್ಥಳೀಯ ಪೊಲೀಸರಿಗೆ ನೆರವಾಗಲು ಕನಿಷ್ಠ 20,000 ಅರೆ ಮಿಲಿಟರಿ ಪಡೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.







