ಮಾಜಿ ಸಚಿವ ಪೋತದಾರ್ ನಿಧನ: ಗಣ್ಯರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ
ಬೆಳಗಾವಿ, ಆ.26: ಹಿರಿಯ ಗಾಂಧಿವಾದಿ, ಜನತಾ ಪರಿವಾದರ ಮುಖಂಡ, ಮಾಜಿ ಸಚಿವ ರಾಮ್‌ಭಾವ್ ಪೋತದಾರ್ (93) ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶನಿವಾರ ಬೆಳಗ್ಗೆ ನಿಧನರಾಗಿದ್ದು, ಸಂಜೆ ಇಲ್ಲಿನ ಶಹಾಪುರದ ಆನಂದವಾಡಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಪೋತದಾರ್ ಅವರು ತಮ್ಮ ಪತ್ನಿ, ಪುತ್ರ ಉದ್ಯಮಿ ಅನಿಲ ಪೋತದಾರ್ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಇನ್ನಿತರ ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
1924ರ ಅಕ್ಟೋಬರ್ 24ರಂದು ಜನಸಿದ ಪೋತದಾರ್ ಅವರು ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿಎ (ಆರ್ಥಶಾಸ್ತ್ರ) ವ್ಯಾಸಂಗ ಮಾಡಿದ್ದಾರೆ. ವ್ಯಾಸಂಗ ಮಾಡುವ ವೇಳೆಯೆ ನಾಟಕ ಮತ್ತು ಚಿತ್ರರಂಗದ ಗೀಳು ಅಂಟಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಹಿಂದಿ ಚಿತ್ರರಂಗದ ದಿಗ್ಗಜರಾದ ವಣಕುದುರೆ ಶಾಂತಾರಾಮ್, ರಾಜ್‌ಕಪೂರ್, ದಿಲೀಪ್‌ಕುಮಾರ್ ಹೆಚ್ಚಿನ ಒಡನಾಟ ಹೊಂದಿದ್ದ ರಾಮ್‌ಭಾವ್ ಪೋತದಾರ್ ಅವರು, 1976ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 1983ರಿಂದ 86ರ ವರೆಗೆ ವಿಧಾನ ಪರಿಷತ್ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿ ಎಪಿಎಂಸಿ ಅಧ್ಯಕ್ಷ, ಬೆಳಗಾವಿ ನಗರಸಭೆ ವಿಪಕ್ಷ ನಾಯಕ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಅವರು, 1986ರಿಂದ 87ರ ವರೆಗೆ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದರು. ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಮಹಾಜನ್ ಆಯೋಗದ ಮುಂದೆ ಸಾಕ್ಷ್ಯ ನೀಡಿದ್ದು, ಅವರ ಹೆಗ್ಗಳಿಕೆಯೆ ಸರಿ.
ಪ್ರಶ್ನಿಸುವಂತಿರಲಿಲ್ಲ: ಅತ್ಯಂತಪ್ರಾಮಾಣಿಕ, ನಿಷ್ಟಾವಂತ, ಶಿಸ್ತಿನ ರಾಜಕಾರಣಿ. ನನ್ನ ರಾಜಕೀಯ ಜೀವನದಲ್ಲಿ ಕಂಡ ಅಪರೂಪದ ವ್ಯಕ್ತಿ. ಸಭಾಪತಿಯಾಗಿ, ಸಚಿವರಾಗಿ ಕೆಲಸ ಮಾಡಿದ್ದು, ಅವರ ಕೆಲಸದ ಬಗ್ಗೆ ಯಾರು ಪ್ರಶ್ನೆ ಮಾಡುವಂತ್ತಿರಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಕಂಬನಿ ಮಿಡಿದಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದದಲ್ಲಿ ಬೆಳಗಾವಿಗೆ ತೆರಳಿದ ದೇವೇಗೌಡ, ಇಲ್ಲಿನ ಭಾಗ್ಯನಗರದಲ್ಲಿರುವ ರಾಮಭಾವ್ ಪೋತದಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮೃತರಿಗೆ ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.







