ಡೇರಾ ಹಿಂಸಾಚಾರ:ಪಂಚಕುಲಾ ಡಿಸಿಪಿ ಅಮಾನತು

ಚಂಡಿಗಡ,ಆ.26: ಡೇರಾ ಸಚ್ಚಾ ಸೌದಾ ಬೆಂಬಲಿಗರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವೈಫಲ್ಯಕ್ಕಾಗಿ ವ್ಯಾಪಕ ಟೀಕೆಗಳನ್ನೆದುರಿಸುತ್ತಿರುವ ಹರ್ಯಾಣ ಸರಕಾರವು ಪಂಚಕುಲಾದ ಡಿಸಿಪಿ ಅಶೋಕ ಕುಮಾರ್ ಅವರನ್ನು ಶನಿವಾರ ಸೇವೆಯಿಂದ ಅಮಾನತುಗೊಳಿಸಿದೆ. ಅವರ ‘ದೋಷಯುಕ್ತ’ ಆದೇಶ ಪಂಚಕುಲಾದಲ್ಲಿ ಜನರು ಜಮಾವಣೆಗೊಳ್ಳಲು ಅವಕಾಶ ನೀಡಿತ್ತು ಎಂದು ಅದು ಆರೋಪಿಸಿದೆ.
ಲೋಪಗಳು ಆಗಿದ್ದವು ಎನ್ನುವುದನ್ನು ಒಪ್ಪಿಕೊಂಡ ಹರ್ಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ರಾಮ ನಿವಾಸ್ ಅವರು, ಅದಕ್ಕಾಗಿಯೇ ಪಂಚಕುಲಾದ ಡಿಸಿಪಿಯವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು. ಡಿಸಿಪಿ ಅಶೋಕ ಕುಮಾರ್ ಹೊರಡಿಸಿದ್ದ ನಿಷೇಧಾಜ್ಞೆಯು ಜನರು ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು ನಿರ್ಬಂಧಿಸಿತ್ತೇ ಹೊರತು ಐವರು ಅಥವಾ ಅದಕ್ಕೂ ಹೆಚ್ಚಿನ ಜನರು ಸೇರುವುದನ್ನಲ್ಲ ಎಂದು ಅವರು ಹೇಳಿದರು.
ಕುಮಾರ್ ಅವರ ದೋಷಯುಕ್ತ ಆದೇಶದಿಂದಾಗಿಯೇ ಭಾರೀ ಸಂಖ್ಯೆಯಲ್ಲಿ ಡೇರಾ ಬೆಂಬಲಿಗರು ಪಂಚಕುಲಾಕ್ಕೆ ಬರಲು ಸಾಧ್ಯವಾಗಿತ್ತು ಎಂದರು.
ತಾನು ಆ.24ರಂದು ಪಂಚಕುಲಾಕ್ಕೆ ಭೇಟಿ ನೀಡಿದಾಗ ಡೇರಾ ಬೆಂಬಲಿಗರೇಕೆ ಭಾರೀ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದಾರೆ ಎಂದು ಪ್ರಶ್ನಿಸಿದ್ದೆ. ನಿಷೇಧಾಜ್ಞೆಯಲ್ಲಿ ಐದು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿರ್ಬಂಧಿಸಲಾಗಿಲ್ಲ, ಹೀಗಾಗಿ ಡೇರಾ ಬೆಂಬಲಿಗರು ಪಂಚಕುಲಾಕ್ಕೆ ಬರುತ್ತಿರುವುದನ್ನು ತಡೆಯಲು ಭದ್ರತಾ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ತನಗೆ ತಿಳಿಸಲಾಗಿತ್ತು. ಆ ವೇಳೆಗಾಗಲೇ ಭಾರೀ ಸಂಖ್ಯೆಯಲ್ಲಿ ಡೇರಾ ಬೆಂಬಲಿಗರು ಅಲ್ಲಿ ಬಂದು ಸೇರಿದ್ದರು ಎಂದೂ ಅವರು ತಿಳಿಸಿದರು.







