ಡೇರಾ ಕೇಂದ್ರಗಳಲ್ಲಿ ಶೋಧಕ್ಕೆ ಹರ್ಯಾಣ ಸರಕಾರದ ಆದೇಶ

ಚಂಡಿಗಡ,ಆ.26: ರಾಜ್ಯದಲ್ಲಿರುವ ಡೇರಾ ಸಚ್ಚಾ ಸೌದಾಕ್ಕೆ ಸೇರಿದ ಎಲ್ಲ ಪ್ರಾರ್ಥನಾ ಕೇಂದ್ರಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುವಂತೆ ಹರ್ಯಾಣ ಸರಕಾರವು ಶನಿವಾರ ಆದೇಶಿಸಿದೆ.
ಹರ್ಯಾಣದಲ್ಲಿಯ ಎಲ್ಲ ‘‘ನಾಮ್ ಚರ್ಚಾ ಘರ್’ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುವಂತೆ ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾದರೆ ವಶಪಡಿಸಿಕೊಳ್ಳುವಂತೆ ನಾವು ಭದ್ರತಾ ಸಿಬ್ಬಂದಿಗಳಿಗಳಿಗೆ ಆದೇಶಿಸಿದ್ದೇವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಮ ನಿವಾಸ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಸಿರ್ಸಾದಲ್ಲಿರುವ ಡೇರಾದ ಕೇಂದ್ರ ಕಚೇರಿ ಮತ್ತು ಪಂಚಕುಲಾದಲ್ಲಿರುವ ಡೇರಾ ಕೇಂದ್ರವೂ ಇವುಗಳಲ್ಲಿ ಸೇರಿವೆ.
ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಿರ್ಸಾ ಮತ್ತು ಪಂಚಕುಲಾಗಳಲ್ಲಿ ಸೇನೆ ಮತ್ತು ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ಪಂಚಕುಲಾದಲ್ಲಿ 28 ಜನರು ಮೃತಪಟ್ಟಿದ್ದು, ಅವರೆಲ್ಲ ದಂಗೆಯಲ್ಲಿ ತೊಡಗಿದ್ದರು. ಪಂಚಕುಲಾವನ್ನು ದೋಚುವುದು ದಂಗೆಕೋರರ ಉದ್ದೇಶವಾಗಿತ್ತು ಎಂದರು.
28 ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಈ ಪೈಕಿ ಹೆಚ್ಚಿನವು ಮಾಧ್ಯಮಗಳಿಗೆ ಸೇರಿದ್ದಾಗಿವೆ. 524 ಜನರನ್ನು ಬಂಧಿಸಲಾಗಿದೆ ಎಂದೂ ರಾಮ ನಿವಾಸ್ ತಿಳಿಸಿದರು.





