ಕೊಲೆ ಮಾಡುತ್ತಿರುವವರ ವಿರುದ್ಧದ ಹೋರಾಟಕ್ಕೆ ಯುವಕರು ಸಿದ್ಧರಾಗಬೇಕು: ಶರತ್ ಬಚ್ಚೇಗೌಡ

ದೇಶ ಕಟ್ಟವ ಸಂಘಟಕರನ್ನು
.
ಶಿಡ್ಲಘಟ್ಟ, ಆ.26: ಭಯೋತ್ಪಾದಕರ ಮನಸ್ಥಿತಿ ಹೊಂದಿಕೊಂಡು ದೇಶ ಕಟ್ಟಲು ಹೊರಟಿರುವ ಸಂಘಟಕರನ್ನು ಕೊಲೆ ಮಾಡುತ್ತಿರುವವರ ವಿರುದ್ಧದ ಹೋರಾಟಕ್ಕೆ ಯುವಕರು ಸಿದ್ಧರಾಗಬೇಕು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಉಸ್ತುವಾರಿ ಶರತ್ ಬಚ್ಚೇಗೌಡ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ತಾಲೂಕು ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶಕಟ್ಟುವಂತಹ ಕೆಲಸದಲ್ಲಿ ತೊಡಗಿಸಿಕೊಂಡು ಯುವಜನರನ್ನು ಸಂಘಟನೆ ಮಾಡುತ್ತಿರುವ ಯುವಕರನ್ನು ಗುರಿಯಾಗಿಸಿಕೊಂಡು ಕೊಲೆಗಳು ಮಾಡಲಾಗುತ್ತಿದೆ. ಎಸ್ಡಿಪಿಐ, ಕೆಡಿಎಫ್, ಪಿಎಪ್ಐ ಸಂಘಟನೆಗಳ ಮುಖಾಂತರ ಕೊಲೆಗಳು ನಡೆಯುತ್ತಿವೆ. ಇಂತಹ ಸಂಧರ್ಭಗಳಲ್ಲಿ ಯುವಜನರು ಸಂಘಟಿತರಾಗದಿದ್ದರೆ ಮುಂದೊಂದು ಮತ್ತಷ್ಟು ಕೊಲೆಗಳಾಗಲಿವೆ ಆದ್ದರಿಂದ ಐದು ವಿಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ಯುವಕರನ್ನು ಒಟ್ಟುಗೂಡಿಸಿಕೊಂಡು ಬೈಕ್ ರ್ಯಾಲಿಯ ಮೂಲಕ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸೆಪ್ಟೆಂಬರ್ 7 ರಂದು ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ಈ ದೇಶದ ದೊಡ್ಡ ಸಂಪನ್ಮೂಲ ಯುವಜನರಾಗಿದ್ದಾರೆ. ಯುವಜನರು ಮೈ ಮರೆತರೆ ಆರೋಗ್ಯವಂತ ಸಮಾಜದ ನಿರ್ಮಾಣ ಕಷ್ಟವಾಗಲಿದೆ. ಆದ್ದರಿಂದ ಸೆಪ್ಟೆಂಬರ್ 5 ರಂದು ಶಿಡ್ಲಘಟ್ಟದಿಂದ 100 ಬೈಕ್ ಗಳ ಮೂಲಕ ಹೊರಟು ಹೋರಾಟದಲ್ಲಿ ಭಾಗವಹಿಸಲು ಯುವಜನರಿಗೆ ಅಗತ್ಯವಾಗಿರುವ ಎಲ್ಲಾ ಸಹಕಾರ ನೀಡುವುದಾಗಿ ಅವರು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ ನಿಲುವು ತಾಳಿರುವುದರ ಜತೆಗೆ ಹೋರಾಟದ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗುವವರನ್ನು ಕೊಲೆ ಮಾಡುತ್ತಿರುವವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಕೊಟ್ಟಿರುವ ದೂರುಗಳನ್ನು ಸ್ಥಳೀಯವಾಗಿ ವಿಚಾರಣೆಗೆ ಒಳಪಡಿಸುವ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಪ್ರಪುಲ್ ಚಂದ್ರ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಭರತ್ ರೆಡ್ಡಿ, ತಾಲೂಕು ಬಿಜೆಪಿ ಅದ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಕಾರ್ಯದರ್ಶಿ ನರೇಶ್, ಬಳುವನಹಳ್ಳಿ ಶ್ರೀಧರ್, ತಾಲೂಕು ಯುವಮೋರ್ಚಾ ಅಧ್ಯಕ್ಷ ಬೈರೇಗೌಡ, ಕಾರ್ಯದರ್ಶಿ ಪ್ರತಾಪ್, ಹಂಡಿಗನಾಳ ಪ್ರಕಾಶ್, ಮುಂತಾದವರು ಹಾಜರಿದ್ದರು.







