ಜೈಲ್‌ನೊಳಗೆ ಗಾಂಜಾ ಸಾಗಾಟಕ್ಕೆ ಯತ್ನ: ಮೂವರು ಆರೋಪಿಗಳ ಸೆರೆ

ಮಂಗಳೂರು, ಆ. 26: ನಗರದ ಕಾರಾಗೃಹದೊಳಗೆ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಉರ್ವ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಶೋಕ್‌ನಗರ ಗುರುಂಪೆ ನಿವಾಸಿ ರಿತೇಶ್, ಪುತ್ತೂರಿನ ಕೆಮ್ಮಿಂಜೆ ನಿವಾಸಿ ರವಿ ಪೂಜಾರಿ ಮತ್ತು ಕುಂಜತ್ತೂರು ನಿವಾಸಿ ರಾಜೇಶ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಜೈಲ್‌ನ ಮುಖ್ಯದ್ವಾರದ ಬಳಿಯಿಂದ ಜೈಲ್‌ನೊಳಗೆ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಉರ್ವ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ಜಿ. ನಾಯಕ್ ಮತ್ತು ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಜೈಲ್‌ನ ಆವರಣದೊಳಗೆ ಗಾಂಜಾ ಕಟ್ಟುಗಳನ್ನು ಎಸೆಯುವ ಸಲುವಾಗಿ ಸುಮಾರು 3,500 ರೂ. ಮೌಲ್ಯದ 250 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು ಈ ಹಿಂದೆ ಇತರ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿದವರೆಂದು ಹೇಳಲಾಗಿದೆ. ಈ ಬಗ್ಗೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





