45 ದೇವಳ, ಐದು ಆಶ್ರಮಗಳ ಅಭಿವೃದ್ಧಿಗೆ ಉ.ಪ್ರದೇಶ ಸರಕಾರದ ನಿರ್ಧಾರ

ಲಕ್ನೊ, ಆ.26: ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಿರುವ ಉತ್ತರಪ್ರದೇಶದ ಸರಕಾರ ಧಾರ್ಮಿಕ ಮಹತ್ವದ ಸ್ಥಳಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 94 ಸ್ಥಳಗಳನ್ನು ಸರಕಾರ ಗುರುತಿಸಿದೆ.
ಇದರಲ್ಲಿ 45 ದೇವಸ್ಥಾನ, ಐದು ಆಶ್ರಮಗಳು ಸೇರಿವೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಯೋಜನೆಯನ್ನು ಮೂರು ವಿಭಾಗ ಮಾಡಲಾಗಿದೆ. ಪಾರಂಪರಿಕ ವಿಭಾಗದಲ್ಲಿ 41.50 ಕೋಟಿ ರೂ, ಧಾರ್ಮಿಕ ವಿಭಾಗ- 1ರಲ್ಲಿ 76 ಕೋಟಿ ರೂ. ಹಾಗೂ ಧಾರ್ಮಿಕ ವಿಭಾಗ-2ರಲ್ಲಿ 62.95 ಕೋಟಿ ರೂ. ಮೀಸಲಿರಿಸಲಾಗಿದೆ. ಅಲ್ಲದೆ ಮೂರು ವಿಭಾಗಗಳ ಯೋಜನೆಯ ಕಾಮಗಾರಿಯ ಸಮರ್ಪಕ ಅನುಷ್ಠಾನದ ಮೇಲುಸ್ತುವಾರಿಗೆ ಪ್ರತ್ಯೇಕ ಏಜನ್ಸಿಗಳನ್ನು ನೇಮಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳ ಜೊತೆಗೆ ಮೀರತ್‌ನಲ್ಲಿರುವ ‘ಹುತಾತ್ಮರ ಸ್ಮಾರಕಗಳು’, ಬಾಂದಾದಲ್ಲಿರುವ ಪ್ರಖ್ಯಾತ ಕಲಿಂಜರ್ ಕೋಟೆ , ಮಹಾಭಾರತ ಕಾಲಕ್ಕೆ ಸೇರಿದ್ದು ಎನ್ನಲಾಗಿರುವ ಬಾಘ್‌ಪಟ್‌ನಲ್ಲಿರುವ ಕೋಟೆ, ದೇವಸ್ಥಾನಗಳು ಕೂಡಾ ಈ ಪಟ್ಟಿಯಲ್ಲಿ ಸೇರಿವೆ.





