ದೇಶದಲ್ಲಿ ನಗದು ಆಧಾರಿತ ವಹಿವಾಟು ವ್ಯವಸ್ಥೆ ಶಾಪ ಇದ್ದಂತೆ: ಕೇಂದ್ರ ಸಚಿವ ಅರುಣ್ ಜೇಟ್ಲಿ

ಬೆಂಗಳೂರು, ಆ.26: ತ್ವರಿತವಾಗಿ ಬೆಳವಣಿಗೆಯಾಗುತ್ತಿರುವ ಭಾರತದಂತಹ ದೇಶದಲ್ಲಿ ನಗದು ಆಧಾರಿತ ವಹಿವಾಟು ವ್ಯವಸ್ಥೆ ಶಾಪ ಇದ್ದಂತೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನಗರದಲ್ಲಿಂದು ಗ್ರಾಮೀಣ ಭಾರತದಲ್ಲಿ ಡಿಜಿಟಲೀಕರಣ ಕಾರ್ಯಕ್ರಮದ ಅಂಗವಾಗಿ, ವಿಜಯ ಬ್ಯಾಂಕ್ ನ 100ನೆ ಗ್ರಾಮೀಣ ಶಾಖೆ,100ನೆ ಡಿಜಿಟಲ್ ಗ್ರಾಮ ಹಾಗೂ 100ನೆ ಎಟಿಎಂಗೆ ಚಾಲನೆ ನೀಡಿ ಮಾತನಾಡಿದ ಅವರು, ಬ್ಯಾಂಕ್ ಗಳು ಹೊಸ ಶಾಖೆ ಮತ್ತು ಎಟಿಎಂಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರ ನಿರ್ಮಾಣದ ಬದ್ಧತೆಯಲ್ಲಿ ತನ್ನನ್ನು ತೊಡಗಿಸಿಕೊಂಡಿವೆ. 100ನೆ ಡಿಜಿಟಲ್ ಗ್ರಾಮ ಸ್ಥಾಪನೆ ಮಾಡಿ ಹಣಕಾಸು ಒಳಗೊಳ್ಳುವಿಕೆಯ ಸರ್ಕಾರದ ಬದ್ಧತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿಜಯ ಬ್ಯಾಂಕ್ ಮಹತ್ವದ ಪಾತ್ರ ವಹಿಸಿದೆ. ಡಿಜಿಟಲ್ ವಹಿವಾಟು ವೆಚ್ಚ ಕಡಿಮೆ ಮಾಡಲು ಮತ್ತು ಡಿಜಿಟಲ್ ಹಣ ವರ್ಗಾವಣೆಯತ್ತ ಜನರನ್ನು ಆಕರ್ಷಿಸಲು ಸರ್ಕಾರ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತಿದೆ. ಇದಕ್ಕೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಭಾರತ ಅತಿಹೆಚ್ಚು ನಗದು ವ್ಯವಸ್ಥೆ ಹೊಂದಿರುವ ದೇಶ. ನೋಟುಗಳ ಮುದ್ರಣ, ವ್ಯವಸ್ಥೆ ಗೆ ನಗದು ಪೂರೈಕೆ ಮಾಡಿದರೆ ವೆಚ್ಚ ಕೂಡ ಹೆಚ್ಚಾಗುತ್ತದೆ. ಭಯೋತ್ಪಾದನೆ, ಆತಂಕವಾದ ಕೂಡ ನಗದು ವ್ಯವಸ್ಥೆಯ ಆಧಾರದ ಮೇಲೆ ನಡೆಯುತ್ತದೆ. ಇದರಿಂದ ಜಿಡಿಪಿ, ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ. ನಗದು ಒಂದು ರೀತಿಯಲ್ಲಿ ಶಾಪ ಇದ್ದಂತೆ, ಹೀಗಾಗಿ ಡಿಜಿಟಲ್ ಆರ್ಥಿಕತೆಯತ್ತ ಹೊರಳಬೇಕಾಗಿದೆ. ಇದೇ ಉದ್ದೇಶದಿಂದ ಜನ್ ಧನ್ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಅತ್ಯಂತ ಹೆಚ್ಚು ಯಶಸ್ಸು ದೊರೆತಿದೆ. ಈ ಯೋಜನೆಯ ಬಹುತೇಕ ಬ್ಯಾಂಕ್ ಖಾತೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ನಗದು ಹೊಂದುವುದು ಒಳ್ಳೆಯದಲ್ಲ. ಡಿಜಿಟಲೀಕರಣದಿಂದ ತೆರಿಗೆ ವ್ಯಾಪ್ತಿ ಹೆಚ್ಚಾಗಿದೆ. ಸರ್ಕಾರ ಕೈಗೊಂಡಿರುವ ಪ್ರತಿಯೊಂದು ಆರ್ಥಿಕ ಸುಧಾರಣಾ ಕ್ರಮದಿಂದ ಉತ್ತಮ ಫಲಿತಾಂಶ ದೊತೆಯುತ್ತಿದೆ. ಈ ದಿಸೆಯಲ್ಲಿ ವಿಜಯ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ವಿಜಯ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕಿಶೋರ್ ಮಾತನಾಡಿ, ವಿಜಯ ಬ್ಯಾಂಕ್ ಕಾಪೋರೇಟ್ ಜವಾಬ್ದಾರಿ ಕ್ರಮದ ಅಂಗವಾಗಿ, ಗ್ರಾಮೀಣ ಮತ್ತು ಅರೆಗ್ರಾಮೀಣ ಪ್ರದೇಶಕ್ಕೆ ಸೇರಿದ ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ ಐದು ವರ್ಷ ಮೀರಿದ ನೂರು ಮಂದಿ ಹೆಣ್ಣು ಮಕ್ಕಳನ್ನು ದತ್ತು ಪಡೆದು ಸ್ನಾತಕೋತ್ತರ ಪದವಿ ವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.







