ಶೈಕ್ಷಣಿಕ ಸಾಲ ಪಡೆದವರು ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಅವಕಾಶ

ಚೆನ್ನೈ, ಆ.26: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲ ಪಡೆದವರು ಕೆನರಾ ಬ್ಯಾಂಕ್‌ನಿಂದ ಬಡ್ಡಿ ಸಬ್ಸಿಡಿ ಪಡೆಯಬಹುದು ಎಂದು ಬ್ಯಾಂಕಿನ ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಪೋಷಕರ ಆದಾಯ ವರ್ಷಕ್ಕೆ 4,50,000 ಲಕ್ಷ ರೂ.ಗಿಂತ ಕಡಿಮೆ ಇರುವವರು ಹಾಗೂ ವೃತ್ತಿಪರ ಹಾಗೂ ತಾಂತ್ರಿಕ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಕಲೆ, ವಿಜ್ಞಾನ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದವರು ತಿಳಿಸಿದ್ದಾರೆ.
ನೀಡಿರುವ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ಸಬ್ಸಿಡಿಗೆ ಆಗಸ್ಟ್ 23ರಿಂದ ನವೆಂಬರ್ 23ರವರೆಗೆ ಅರ್ಜಿ ಸಲ್ಲಿಸಲು ಬ್ಯಾಂಕ್‌ಗಳಿಗೆ ಅನುಕೂಲವಾಗುವಂತೆ ವೆಬ್ ಪೋರ್ಟಲ್ ಆರಂಭಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇತ್ತೀಚೆಗೆ ಕೆನರಾ ಬ್ಯಾಂಕ್‌ಗೆ ಸಲಹೆ ನೀಡಿದೆ ಎಂದು ಶೈಕ್ಷಣಿಕ ಸಾಲ ಕ್ರಿಯಾಪಡೆಯ ಸಂಯೋಜಕ ಕೆ.ಶ್ರೀನಿವಾಸನ್ ತಿಳಿಸಿದ್ದಾರೆ.
ಈ ಹಿಂದೆ ಹಲವು ಬ್ಯಾಂಕ್‌ಗಳು ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸದ ಕಾರಣ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗಿದ್ದರು ಎಂದವರು ತಿಳಿಸಿದ್ದಾರೆ. ಶೈಕ್ಷಣಿಕ ಸಾಲ ಬಡ್ಡಿ ಸಬ್ಸಿಡಿ ಯೋಜನೆಗೆ ಕೆನರಾ ಬ್ಯಾಂಕ್ ‘ನೋಡಲ್ ಬ್ಯಾಂಕ್’ ಆಗಿದ್ದು , ಈ ಸೇವೆಗಾಗಿ ವಿಶೇಷ ವೆಬ್ ಪೋರ್ಟಲ್ ಆರಂಭಿಸಿದೆ. ಇತರ ಬ್ಯಾಂಕ್‌ಗಳು ತಾವು ನೀಡಿದ ಶೈಕ್ಷಣಿಕ ಸಾಲದ ಬಡ್ಡಿ ಸಬ್ಸಿಡಿಯ ಕೋರಿಕೆಯನ್ನು ಕೆನರ ಬ್ಯಾಂಕ್‌ಗೆ ಸಲ್ಲಿಸಬೇಕಿದೆ.
ಅಲ್ಲದೆ ಶಿಕ್ಷಣ ಸಾಲ ಪಡೆದವರೂ, ಸಾಲ ಪಡೆದುಕೊಂಡ ಬ್ಯಾಂಕಿನ ಶಾಖೆಗೆ ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು. ಈ ಅರ್ಜಿಯ ಪ್ರತಿಯನ್ನು ಪ್ರಾದೇಶಿಕ ವ್ಯವಸ್ಥಾಪಕರಿಗೆ ಕಳುಹಿಸಬೇಕು. ಅಧಿಕೃತ ಪ್ರಾಧಿಕಾರದ ಸಹಿ ಉಳ್ಳ ಆದಾಯ ಪ್ರಮಾಣಪತ್ರವನ್ನು ಪೋಷಕರು ಸಾಲ ಪಡೆಯುವ ಸಂದರ್ಭ ಸಲ್ಲಿಸಬೇಕು. ಕೇಂದ್ರ ಸರಕಾರದ ನಿಯಮದ ಪ್ರಕಾರ, ಅರ್ಹ ವಿದ್ಯಾರ್ಥಿಗಳಿಗೆ ಕಲಿಕಾ ಅವಧಿ ಹಾಗೂ ಆ ಬಳಿಕದ ಒಂದು ವರ್ಷದ ‘ಸ್ತಂಭನ’ ಅವಧಿಯಲ್ಲಿ ಸಾಲದ ಮೊತ್ತದ ಮೇಲಿನ ಪೂರ್ಣ ಬಡ್ಡಿಯನ್ನು ಸಬ್ಸಿಡಿಯನ್ನಾಗಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಸಾಲ ಹಾಗೂ ಬಡ್ಡಿ ಸಬ್ಸಿಡಿಯ ಕುರಿತ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸುವಂತೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲು ಎಲ್ಲಾ ಬ್ಯಾಂಕ್‌ಗಳಿಗೆ ‘ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್’ ಸೂಚಿಸಿದೆ. ಒಂದು ವೇಳೆ ಅರ್ಹ ವಿದ್ಯಾರ್ಥಿಗಳ ಅರ್ಜಿಯನ್ನು ಬ್ಯಾಂಕ್‌ಗಳು ಸೂಕ್ತಕಾಲದಲ್ಲಿ ಸಲ್ಲಿಸಲು ವಿಫಲವಾದರೆ, ಆಗ ವಿದ್ಯಾರ್ಥಿಗಳು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳ ಮೂಲಕ ಕಾನೂನಾತ್ಮಕ ಪರಿಹಾರದ ಮೂಲಕ ನಷ್ಟ ಮತ್ತು ಪರಿಹಾರ ಪಡೆಯಬಹುದು. ಅಲ್ಲದೆ ಯಾವುದೇ ದೂರುಗಳಿದ್ದರೆ ‘ಬ್ಯಾಂಕಿಂಗ್ ಓಂಬಡ್ಸ್‌ಮನ್’ ಸಂಪರ್ಕಿಸಬಹುದು ಎಂದು ಸೂಚಿಸಲಾಗಿದೆ.







