ಕಾಬೂಲ್: ಮಸೀದಿ ಮೇಲೆ ಆತ್ಮಹತ್ಯಾ ದಾಳಿ; ಮಡಿದವರ ಸಂಖ್ಯೆ 28ಕ್ಕೇರಿಕೆ

ಕಾಬೂಲ್,ಆ.26: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಸೀದಿಯಲ್ಲಿ ಶುಕ್ರವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸಂಖ್ಯೆ 28ಕ್ಕೇರಿದೆ.
ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯ ಆವರಣಕ್ಕೆ ನುಗ್ಗಿದ ಭಯೋತ್ಪಾದಕರಲ್ಲಿ ಇಬ್ಬರು ತಮ್ಮನ್ನು ಸ್ಫೋಟಿಸಿಕೊಂಡಿದ್ದರು. ಉಳಿದಿಬ್ಬರನ್ನು ಸ್ಥಳದಲ್ಲಿದ್ದ ಭದ್ರತಾಪಡೆಗಳು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಕಾಬೂಲ್‌ನ ಪೊಲೀಸ್ ಅಧಿಕಾರಿ ಮುಹಮ್ಮದ್ ಸಾದಿಕ್ ಮುರಾದಿ ತಿಳಿಸಿದ್ದಾರೆ. ಸ್ಫೋಟದಲ್ಲಿ 20 ಮಂದಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 28 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದ್ದಾರೆ.
ಮಧ್ಯಾಹ್ನ ಪ್ರಾರ್ಥನೆಗಾಗಿ ಸೇರಿದ್ದ ಜನರ ಮೇಲೆ ಭಯೋತ್ಪಾದಕರು ಸುಮಾರು ನಾಲ್ಕು ತಾಸುಗಳ ಕಾಲ ಮನಬಂದಂತೆ ಗುಂಡುಹಾರಿಸಿದ್ದಾರೆ ಹಾಗೂ ಸ್ಫೋಟಕಗಳನ್ನು ಎಸೆದಿದ್ದರು.
ದಾಳಿಯ ಹೊಣೆ ನಿರಾಕರಿಸಿದ ತಾಲಿಬಾನ್
ಈ ಮಧ್ಯೆ ಈ ಭಯೋತ್ಪಾದಕ ದಾಳಿಯನ್ನು ಉಗ್ರಗಾಮಿ ಗುಂಪು ತಾಲಿಬಾನ್ ಖಂಡಿಸಿದೆ. ಈ ಬಗ್ಗೆ ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿತ್ ಸುದ್ದಿಸಂಸ್ಥೆಯೊಂದಕ್ಕೆ ದೂರವಾಣಿ ಮೂಲಕ ಹೇಳಿಕೆ ನೀಡಿ, ತನ್ನ ಗುಂಪಿಗೂ, ಮಸೀದಿ ಮೇಲೆ ನಡೆದ ದಾಳಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದೆ.
ಕಾಬೂಲ್ ಮಸೀದಿಯಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಅಫ್ಘಾನ್ ಅಧ್ಯಕ್ಷ ಅಶ್ರಫ್ ಗನಿ ಖಂಡಿಸಿದ್ದಾರೆ. ಭಯೋತ್ಪಾದಕರು ರಣರಂಗದಲ್ಲಿ ಸೋಲನುಭವಿಸುತ್ತಿದ್ದು, ಹತಾಶರಾಗಿರುವ ಅವರು ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಿಂದ ಅಮೆರಿಕನ್ ಸೇನೆಯನ್ನು ಹಿಂತೆಗೆದುಕೊಳ್ಳಲಾಗುವುದಿಲ್ಲ, ಬದಲಿಗೆ ಇನ್ನೂ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಕಳುಹಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಈ ಭಯೋತ್ಪಾದಕ ದಾಳಿ ನಡೆದಿದೆ.







