ಐಸಿಸ್ ಭದ್ರಕೋಟೆ ತಲ್ ಅಫರ್ ಇರಾಕಿ ಪಡೆಗಳ ವಶ

ಬಾಗ್ದಾದ್,ಆ.26: ಮೊಸುಲ್ ನಗರಕ್ಕೆ ಲಗ್ಗೆ ಹಾಕಿದ ಬಳಿಕ ಇರಾಕಿ ಪಡೆಗಳು ಐಸಿಸ್‌ನ ಹಿಡಿತದಲ್ಲಿದ್ದ ತಲ್‌ಅಫರ್ ಪಟ್ಟಣ ಹಾಗೂ ಅಲ್ಲಿನ ಐತಿಹಾಸಿಕ ಕೋಟೆಯನ್ನು ಶನಿವಾರ ಸ್ವಾಧೀನಪಡಿಸಿಕೊಂಡಿವೆ. ಇದರೊಂದಿಗೆ ಐಸಿಸ್‌ನ ಕಟ್ಟಕಡೆಯ ಭದ್ರಕೋಟೆಯನ್ನು ಕೂಡಾ ಮರುವಶಪಡಿಸಿಕೊಳ್ಳುವಲ್ಲಿ ಇರಾಕಿ ಪಡೆಗಳು ಯಶಸ್ವಿಯಾದಂತಾಗಿದೆ.
ಭಯೋತ್ಪಾದನೆ ನಿಗ್ರಹದಳದ ಘಟಕಗಳು ತಲ್‌ಅಫರ್ ಕೋಟೆ ಹಾಗೂ ಬಸಾತಿನ್ ಪ್ರದೇಶವನ್ನು ವಿಮೋಚನೆಗೊಳಿಸಿವೆ ಹಾಗೂ ಕೋಟೆಯ ಮೇಲೆ ಇರಾಕಿ ಧ್ವಜವನ್ನು ಹಾರಿಸಿವೆಯೆಂದು ಸೇನಾ ಕಾರ್ಯಾಚರಣೆ ಪಡೆಗಳ ಮುಖ್ಯಸ್ಥ ಅಬ್ದುಲಮೀರ್ ಯಾರಾಲ್ಲಾಹ್ ತಿಳಿಸಿದ್ದಾರೆ.
ಭಯೋತ್ಪಾದನಾ ನಿಗ್ರಹಪಡೆಗಳು ಹಾಗೂ ಪೊಲೀಸ್ ಘಟಕಗಳು ಐಸಿಸ್‌ನ ಹಿಡಿತದಲ್ಲಿದ್ದ ತಫಲ್ ನಗರದ ಉತ್ತರಭಾಗದಲ್ಲಿರುವ ಇತರ ಮೂರು ಪ್ರದೇಶಗಳನ್ನು ಕೂಡಾ ವಶಪಡಿಸಿಕೊಂಡಿವೆ.
ಆದಾಗ್ಯೂ ತಾಲ್‌ಅಫರ್ ಪಟ್ಟಣದ ಉತ್ತರಭಾಗದ ಹೊರವಲಯದಲ್ಲಿ ಈಗಲೂ ಇರಾಕಿಪಡೆಗಳು ಹಾಗೂ ಐಸಿಸ್ ಉಗ್ರರ ನಡುವೆ ಘರ್ಷಣೆ ಮುಂದುವರಿದಿದೆಯೆಂದು ಯಾರಾಲ್ಲಾಹ್‌ತಿಳಿಸಿದ್ದಾರೆ.
ಇರಾಕಿ ಪಡೆಗಳು ಆರುವಾರಗಳ ಹಿಂದೆ ಸುದೀರ್ಘ ಕಾರ್ಯಾಚರಣೆಯ ಬಳಿಕ ಮೊಸುಲ್ ನಗರವನ್ನು ಐಸಿಸ್‌ನಿಂದ ಮುಕ್ತಗೊಳಿಸಿದ್ದವು.
ಸರಕಾರಿ ಪಡೆಗಳು ಹಾಗೂ ಹಶೆದ್ ಅಲ್-ಶಾಬಿ ಅರೆಸೈನಿಕ ಪಡೆಗಳು ಜಂಟಿಯಾಗಿ ಅಮೆರಿಕ ನೇತೃತ್ವದ ಮಿತ್ರಪಡೆಗಳ ಬೆಂಬಲದೊಂದಿಗೆ ಕಳೆದ ರವಿವಾರ ತಲ್ ಅಫರ್ ಪಟ್ಟಣದ ಮೇಲೆ ದಾಳಿ ನಡೆಸಿದ್ದವು.ಇದಕ್ಕೂ ಮೊದಲು ಹಲವು ವಾರಗಳ ಕಾಲ ಇರಾಕಿ ಪಡೆಗಳು ಹಾಗೂ ಅಮೆರಿಕ ನೇತೃತ್ವದ ಮಿತ್ರಪಡೆಗಳು, ತಲ್‌ಅಫರ್ ಪಟ್ಟಣದ ಆಸುಪಾಸಿನಲ್ಲಿರುವ ಐಸಿಸ್ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದವು.
ತಲ್‌ಅಫರ್ ಪಟ್ಟಣ ಐಸಿಸ್ ವಶವಾದ ಬಳಿಕ ಅಲ್ಲಿನ ಸುಮಾರು 2 ಲಕ್ಷ ಮಂದಿ ನಿವಾಸಿಗಳು ಪಲಾಯನಗೈದಿದ್ದರು.







