ಜನಾಂಗೀಯ ದ್ವೇಷಿಗೆ ಟ್ರಂಪ್ ಕ್ಷಮಾದಾನ
ಅಕ್ರಮವಲಸಿಗರ ಮೇಲೆ ದೌರ್ಜನ್ಯ ಎಸಗಿದ ಅಪರಾಧ ಹೊತ್ತ ಮಾಜಿ ಪೊಲೀಸ್ ಅಧಿಕಾರಿ ಜೋ ಅರ್ಪಾಯಿಯೊ

ವಾಶಿಂಗ್ಟನ್,ಆ.26: ಲ್ಯಾಟಿನ್ ರಾಷ್ಟ್ರಗಳ ವಲಸಿಗರ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಕಳೆದ ತಿಂಗಳು ದೋಷಿಯೆಂದು ಘೋಷಿಸಲ್ಪಟ್ಟಿದ್ದ ಅರಿರೆನಾ ಸಂಸ್ಥಾನದ ಮಾಜಿ ಪೊಲೀಸ್ ಅಧಿಕಾರಿ ಜೋ ಅರ್ಪಾಯಿಯೊ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಶಮಾದಾನ ನೀಡಿದ್ದಾರೆ.
ಲ್ಯಾಟಿನ್ ಮೂಲದ ಅಕ್ರಮ ವಲಸಿಗರನ್ನು ಬಂಧಿಸುವುದನ್ನು ನಿಲ್ಲಿಸಬೇಕೆಂಬ ಫೆಡರಲ್ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿದ ಆರೋಪವನ್ನು 85 ರ್ಷದ ಜೋ ಅರ್ಪಾಯಿ ಎದುರಿಸುತ್ತಿದ್ದರು. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ, ಅವರು ಕ್ಷಮಾದಾನ ಘೋಷಿಸಿರುವುದು ಇದೇ ಮೊದಲ ಸಲವಾಗಿದೆ.
‘‘ಅರ್ಪಾಯಿಯೋ ಓರ್ವ ದೇಶಭಕ್ತನಾಗಿದ್ದು, ಆತ ಅರಿರೆನಾ ರಾಜ್ಯವನ್ನು ಸುರಕ್ಷಿತವಾಗಿಟ್ಟಿದ್ದರು’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅರ್ಪಾಯಿಯೊಗೆ ಕ್ಷಮಾದಾನ ನೀಡುವ ಟ್ರಂಪ್ ಅವರ ನಡೆಯನ್ನು ಡೆಮಾಕ್ರಾಟಿಕ್ ನಾಯಕರು ಹಾಗೂ ಕೆಲವರು ರಿಪಬ್ಲಿಕನ್ನರು ಮತ್ತು ಮಾನವಹಕ್ಕು ಕಾರ್ಯಕರ್ತರು ಕಟುವಾಗಿ ಟೀಕಿಸಿದ್ದಾರೆ. ಶಾರ್ಲೆಟ್ಸ್‌ವಿಲ್‌ನಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಹಿಂಸಾಚಾರದಿಂದ ಈಗ ತಾನೆ ಚೇತರಿಸಿಕೊಳ್ಳುತ್ತಿರುವ ಅಮೆರಿಕವನ್ನು ವಿಭಜಿಸಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಅರ್ಪಾಯಿಯೊ ಅವರು 50 ವರ್ಷಗಳಿಗೂ ಅಧಿಕ ಸಮಯದಿಂದ ಅಮೆರಿಕಕ್ಕೆ ಸೇವೆ ಸಲ್ಲಿಸಿದ್ದಾರೆಂದು ಶ್ವೇತಭವನದ ಹೇಳಿಕೆಯೊಂದು ತಿಳಿಸಿದೆ. ಅಪರಾಧ ಹಾಗೂ ಅಕ್ರಮ ವಲಸೆಯ ಪಿಡುಗಿನಿಂದ ಸಾರ್ವಜನಿಕರನ್ನು ಅರ್ಪಾಯಿಯೊ ರಕ್ಷಿಸಿದ್ದು, ಅಧ್ಯಕ್ಷರ ಕ್ಷಮಾದಾನಕ್ಕೆ ಆತ ಅರ್ಹರಾಗಿದ್ದಾರೆಂದು ಅದು ಹೇಳಿದೆ.
ಅಕ್ರಮ ವಲಸಿಗರು ಕೇವಲ ಒಳಉಡುಪಿನಲ್ಲಿ ಇರುವಂತೆ ಮಾಡಿ, ಅವರನ್ನು ಮರುಭೂಮಿಯ ಶಿಬಿರಗಳಲ್ಲಿ ಕೂಡಿಹಾಕಿದ ಆರೋಪವನ್ನು ಜೋ ಅರ್ಪಾಯಿಯೋ ಎದುರಿಸುತ್ತಿದ್ದಾರೆ.
ತನಗೆ ಕ್ಷಮಾದಾನ ನೀಡಿದ್ದಕ್ಕಾಗಿ ಟ್ರಂಪ್ ಅವರಿಗೆ ತುಂಬಾ ಅಭಾರಿಯಾಗಿರುವುದಾಗಿ ಅರಿರೆನಾದ ಮಾಜಿ ಪೊಲೀಸ್ ವರಿಷ್ಠ ಅರ್ಪಾಯಿಯೊ ಟ್ವೀಟ್ ಮಾಡಿದ್ದಾರೆ. ನ್ಯಾಯಾಂಗದಲ್ಲಿರುವ ಒಬಾಮ ಆಡಳಿತದ ಪಳೆಯುಳಿಕೆಗಳಿಂದಾಗಿ ತನ್ನನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸಲಾಗಿದೆಯೆಂದು ಆತ ಆರೋಪಿಸಿದ್ದಾರೆ.







