ರೈತರ ಸಮಸ್ಯೆ ನಿವಾರಿಸುವ ಬದ್ಧತೆಯನ್ನು ರಾಜ್ಯ ಸರಕಾರ ತೋರಿಸುತ್ತಿಲ್ಲ: ಪ್ರೊ.ಸಿ. ನರಸಿಂಹಪ್ಪ

ದಾವಣಗೆರೆ, ಆ.26: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಮಳೆಗಾಲಕ್ಕೂ ನೀರಿಲ್ಲದೆ ಅತಂತ್ರ ಸ್ಥಿತಿ ಅನುಭವಿಸುವಂತಾಗಿದ್ದು, ಭದ್ರಾ ರೈತರನ್ನು ಮಳೆಯಾಶ್ರಿತ ಬೆಳೆಕಡೆಗೆ ದೂಡುವಂತಹ ಅಮಾನವೀಯ, ಅಪರಾಧಿಕೃತ ಪ್ರಯತ್ನ ನಡೆಯುತ್ತಿದ್ದು ಇದನ್ನು ತಪ್ಪಿಸಬೇಕಿದೆ ಎಂದು ಭಾರತೀಯ ರೈತ ಒಕ್ಕೂಟ ಭದ್ರಾ ಶಾಖೆ ಪ್ರಧಾನ ಕಾರ್ಯದರ್ಶಿ ಪ್ರೊ.ಸಿ. ನರಸಿಂಹಪ್ಪ ಜನಪ್ರತಿನಿಧಿಗಳಿಗೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಭದ್ರಾ ನಾಲೆ ಮಳೆಗಾಲದಲ್ಲಿಯೂ ಬೆಳೆಗಳಿಗೆ ತುರ್ತು ನೀರು ಹರಿಸುವ ಅವಶ್ಯಕತೆ ಇದೆ. ಆದರೆ, ನೀರು ನಿರ್ವಹಣೆಯಲ್ಲಿ ಸಂಬಂಧಪಟ್ಟವರು ಸಂಪೂರ್ಣ ವಿಫಲವಾಗಿದ್ದು, ಭದ್ರಾ ಅಣೆಕಟ್ಟು ದಿಕ್ಕೇ ಇಲ್ಲದ ಸ್ಥಿತಿಯಲ್ಲಿದೆ ಎಂದ ಅವರು, 2016ರ ಬೇಸಿಗೆ ಮತ್ತು ಮಳೆಗಾಲದ ಎರಡು ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆಯಾಗದ ಕಾರಣ 2.65 ಲಕ್ಷ ಎಕರೆ ಅಚ್ಚುಕಟ್ಟುದಾರರು ನೂರಾರು ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ಅವರು ದೂರಿದರು.
ಈ ಕೂಡಲೇ ಸಭೆ ಸೇರಿಸಿ ಅಚ್ಚುಕಟ್ಟಿಗೆ ನೀರು ಹರಿಸುವ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ನೀರಿಲ್ಲದ ಭಾಗದಲ್ಲಿ ಸಭೆ ಕರೆಯುತ್ತಾರೆ. ಆದರೆ, ನೀರಿರುವ ನಮ್ಮ ಭಾಗದಲ್ಲಿ ಮಾತ್ರ ಸಭೆ ಕರೆಯದೆ ರೈತರ ತೊಂದರೆ ನಿವಾರಿಸುವ ಬದ್ಧತೆ ತೋರಿಸುತ್ತಿಲ್ಲ. ನೀರಾವರಿ ಸಲಹಾ ಸಮಿತಿಯೂ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕೇವಲ ಕಾವೇರಿ ಭಾಗದಲ್ಲಿ ಮೋಡ ಬಿತ್ತನೆ ಮಾಡುವುದು ಸರಿಯಲ್ಲ. ನಮ್ಮ ಭಾಗದಲ್ಲಿಯೂ ಅಂದರೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮೋಡಬಿತ್ತನೆಗೆ ಸೂಕ್ತ ವಾತಾವರಣವಿದೆ. ಈ ಭಾಗದಲ್ಲಿ ಮೋಡ ಬಿತ್ತನೆ ಮಾಡುವ ಅವಶ್ಯಕತೆ ಇದೆ. ಇದರಿಂದ ಉತ್ತಮ ಮಳೆ ಬರುತ್ತದೆ. ಕೇವಲ ಬೆಂಗಳೂರು ಭಾಗಕ್ಕೆ ಮಾತ್ರ ತೃಪ್ತಿಗೊಳಿಸಲು ಹೊರಟಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಎಚ್.ಆರ್. ಲಿಂಗರಾಜು, ಕೆ.ಎಂ. ಸುರೇಶ್, ಕುಂದುವಾಡ ಮಹೇಶ್ ಮತ್ತಿತರರಿದ್ದರು.







