ಅಮೆರಿಕ ಸೇನೆಯಲ್ಲಿ ಲಿಂಗಾಂತರಿಗಳಿಗೆ ನಿಷೇಧ
ಆದೇಶಪತ್ರಕ್ಕೆ ಟ್ರಂಪ್ ಸಹಿ

ವಾಶಿಂಗ್ಟನ್,ಆ.26:ಅಮೆರಿಕ ಸೇನೆಯಲ್ಲಿ ಲಿಂಗಾಂತರಿಗಳ ನೇಮಕಕ್ಕೆ ಅವಕಾಶ ನೀಡುವ ಒಬಾಮ ಆಡಳಿತದ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಈ ನಿರ್ಧಾರವು ‘ಕ್ರೂರ’ವಾದುದೆಂದು ಡೆಮಾಕ್ರಾಟರು ಟೀಕಿಸಿದ್ದು, ಸೇನೆಗೆ ನೋವು ಹಾಗೂ ಅಪಮಾನವನ್ನುಂಟು ಮಾಡಿರುವುದಾಗಿ ಹೇಳಿದ್ದಾರೆ.
ಲಿಂಗಾಂತರಿಗಳಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ನಿಷೇಧಿಸುವ ಕುರಿತಾಗಿ 2016ರ ಜೂನ್‌ಗೆ ಮುನ್ನ ಚಾಲ್ತಿಯಲ್ಲಿದ್ದ ನಿಯಮವನ್ನು ಮತ್ತೆ ಜಾರಿಗೆ ತರುವಂತೆ ರಕ್ಷಣಾ ಕಾರ್ಯದರ್ಶಿ, ಆಂತರಿಕ ಭದ್ರತೆ ಕಾರ್ಯದರ್ಶಿ ಹಾಗೂ ಅಮೆರಿಕ ತಟರಕ್ಷಣಾ ದಳದ ಕಾರ್ಯದರ್ಶಿಯವರನ್ನು ಸೂಚಿಸುವ ವಿಜ್ಞಾಪನಾ ಪತ್ರಕ್ಕೆ ಟ್ರಂಪ್ ಶುಕ್ರವಾರ ವಿಧ್ಯುಕ್ತವಾಗಿ ಸಹಿಹಾಕಿದ್ದಾರೆ.
ಲಿಂಗಾಂತರಿಗಳು ಸೇನೆಯಲ್ಲಿ ಮುಕ್ತವಾಗಿ ಸೇವೆ ಸಲ್ಲಿಸಲು ಅನುಮತಿ ನೀಡುವ ಉದ್ದೇಶದಿಂದ ಒಬಾಮ ಅವರು ಅಮೆರಿಕದ ರಕ್ಷಣಾ ಇಲಾಖೆಯ ಸ್ಥಾಪಿತ ಕಾರ್ಯಚೌಕಟ್ಟಿನಲ್ಲಿ ಮಾರ್ಪಾಡುಗಳನ್ನು ಮಾಡಿದ್ದರೆಂದು ಟ್ರಂಪ್ ಆಪಾದಿಸಿದ್ದಾರೆ. ಇದರಿಂದಾಗಿ ಲಿಂಗಪರಿವರ್ತನೆಗಾಗಿ ಶಸ್ತ್ರಕ್ರಿಯೆಗೊಳಗಾಗ ಬಯಸುವ ಸೈನಿಕರಿಗೆ ಈ ವರ್ಷದ ಜುಲೈ 1ರಿಂದ ಹಣಕಾಸಿನ ನೆರವು ನೀಡಲು ಸೇನೆಯ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅಧಿಕಾರ ನೀಡಲಾಗಿತ್ತು ಎಂದು ಟ್ರಂಪ್ ಆಪಾದಿಸಿದ್ದಾರೆ.





