ಆ.31ರಂದು ಭದ್ರಾ ಡ್ಯಾಂಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ: ಡಾ.ಮಂಜುನಾಥ ಗೌಡ

ದಾವಣಗೆರೆ, ಆ.26: ಭದ್ರಾ ಅಚ್ಚುಕಟ್ಟುದಾರರಿಂದ ಆ. 31ರಂದು ತುಂಗಾ ನದಿಯಿಂದ ಭದ್ರಾ ಡ್ಯಾಂಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಏತ ನೀರಾವರಿ ಭದ್ರಾ ಅಚ್ಚುಕಟ್ಟು ಪ್ರದೇಶದ ಅಧ್ಯಕ್ಷ ಡಾ.ಮಂಜುನಾಥ ಗೌಡ ತಿಳಿಸಿದರು.
ನಗರದ ಶಿವಯೋಗಾಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋರಾಟದ ಪೂರ್ವಭಾವಿ ಸಭೆಯಯಲ್ಲಿ ಮಾತನಾಡಿದ ಅವರು, ಅಂದು ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.
ಮಳೆಗಾಲದ ಸಂದರ್ಭದಲ್ಲಿ ಜಗಳೂರು, ಹೊಳಲ್ಕೆರೆ, ಸಿರಿಗೆರೆ, ಭೀಮಸಮುದ್ರ, ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕುಗಳಲ್ಲಿ ಹಾಗೂ ನಗರವಾಸಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ತುಂಬದೆ ಇರುವ ಭದ್ರಾ ನದಿಗೆ ನೀರು ತುಂಬಿಸಲು ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಜೂನ್‍ನಿಂದ ಅಕ್ಟೋಬರ್‍ವರೆಗೆ 3.48 ಟಿಎಂಸಿ ನೀರನ್ನು ಸರಬರಾಜು ಮಾಡಲು ಅವಕಾಶವಿದ್ದು, ಈ ಅವಕಾಶ ಸದ್ಬಳಕೆ ಮಾಡಿಕೊಂಡು ಸುಮಾರು 17.40 ಟಿಎಂಸಿ ನೀರನ್ನು ಭದ್ರಕ್ಕೆ ತುಂಬಿಸಿದ್ದಲ್ಲಿ ಆ ಭಾಗದ ರೈತರ ಬೆಳೆಗೆ ಅನುಕೂಲವಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯ ಟೆಂಡರ್ ಪ್ರಕ್ರಿಯೆ 2008ರಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. 2013ಕ್ಕೆ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಇನ್ನು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ ಕೊಟ್ಟಿದ್ದು, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಅವರು ದೂರಿದರು.
ಈಗಾಗಲೇ ಸರ್ಕಾರವು 324 ಕೋಟಿ ರೂ. ಯೋಜನೆಗೆ ಮಂಜೂರಾತಿ ನೀಡಿದೆ. ಇನ್ನು 8 ಕಿ.ಮೀ. ಕೆಲಸವಾಗಬೇಕಾಗಿದ್ದು ಅರಣ್ಯ ಇಲಾಖೆಯ ಪ್ರವೇಶದಿಂದ ಕಾಮಗಾರಿ ಪೂರ್ಣಗೊಂಡರೆ ಮುಂದಿನ ಜೂನ್ ಒಳಗೆ ಬೆಳೆಗಳಿಗೆ ನೀರು ಹರಿಸಲು ಸಾಧ್ಯ ಎಂದ ಅವರು, ಅಪ್ಪರ್ ಭದ್ರ ಯೋಜನೆಯ ಮೊದಲ ಹಂತವು ಮಂಜೂರಾಗಿದ್ದು ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ಅಪ್ಪರ್ ಭದ್ರ ಯೋಜನೆ ಪೂರ್ಣಗೊಳ್ಳಬೇಕಾದರೆ ಇನ್ನು 1 ದಶಕ ಬೇಕಾಗುತ್ತದೆ. ಪ್ರತಿಭಟನಾ ಮೆರವಣಿಗೆ ಹೋರಾಟಕ್ಕೆ ಭದ್ರಾ ಅಚ್ಚುಕಟ್ಟುದಾರರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದರು
ತಾಪಂ ಉಪಾಧ್ಯಕ್ಷ ಸಂಗನಗೌಡ್ರು ಮಾತನಾಡಿ, ಕುಡಿಯುವ ನೀರಿಗಾಗಿ ನೂರಾರು ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಆದರೆ, ಕೆರೆಕಟ್ಟೆ ಕಟ್ಟಿಸಿದರೆ ವೆಚ್ಚ ಕಡಿಮೆ ಮಾಡಬಹುದು ಎಂದರು.
ಸಭೆಯಲ್ಲಿ ರೈತ ಮುಖಂಡರುಗಳಾದ ಜಿ. ಚಂದ್ರನಾಯ್ಕ, ಕೆ.ಬಿ. ಶಿವಕುಮಾರ್, ಎನ್.ಜಿ. ಸ್ವಾಮಿ ನೇರ್ಲ್ಲಿಗೆ, ಟಿ.ಎಸ್. ಅಶೋಕ್, ವೀರೇಶ್, ಅತ್ತಿಗೆರೆ ರೇವಣ್ಣ, ಕೆ.ಪಿ. ಕಲ್ಲಿಂಗಪ್ಪ ಮತ್ತಿತರರಿದ್ದರು.







