ಮಂಡ್ಯ: ಗುಂಪು ಹಿಂಸಾ ಹತ್ಯೆ ಖಂಡಿಸಿ ಎಸ್‍ಡಿಪಿಐಯಿಂದ ಪ್ರತಿಭಟನೆ

ಮಂಡ್ಯ, ಆ.26: ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ, ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದೆ ಎಂದು ಆರೋಪಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್‍ಇಂಡಿಯಾದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಎಂಬ ರಾಷ್ಟ್ರೀಯ ಅಭಿಯಾನದಡಿ ನಗರದ ಗುತ್ತಲು ಕಾಲನಿಯ ಟಿಪ್ಪು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗೋರಕ್ಷಕರ ಹೆಸರಿನಲ್ಲಿ ಹಿಂಸಾಕೃತ್ಯ ನಡೆಸುತ್ತಿರುವವರ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ದೇಶ ಗುಂಪು ಹಿಂಸಾ ಹತ್ಯಾ ಗಣ ರಾಜ್ಯವಾಗಿ ಬದಲಾಗುತ್ತಿದೆ. ಗೋರಕ್ಷಕರು ಮತಿಭ್ರಾಂತ ಆದರ್ಶವನ್ನಿಟ್ಟುಕೊಂಡು ಅಸಹಾಯಕ ಮುಸ್ಲಿಂ, ದಲಿತ, ಇತರೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗೋರಕ್ಷಕರ ಹೆಸರಿನಲ್ಲಿ ದಾಳಿ ನಡೆಸಿದವರಿಗೆ ಸುಮಾರು 31 ಮಂದಿ ಮುಸ್ಲಿಂ ಮತ್ತು 8 ಮಂದಿ ಬಲಿಯಾಗಿದ್ದಾರೆ. ನೂರಾರು ಕುಟುಂಬಗಳು ಧ್ವಂಸಗೊಂಡಿವೆ. ಬಿಜೆಪಿ ನೇತೃತ್ವದ ಸರಕಾರಗಳು ಇಂತಹ ಕೃತ್ಯವೆಸಗುವವರಿಗೆ ರಕ್ಷಣೆ ನೀಡುತ್ತಿವೆ ಎಂದು ಅವರು ಕಿಡಿಕಾರಿದರು.
ಮತಿಭ್ರಾಂತ ಭಯೋತ್ಪಾದಕರ ಕಪಿಮುಷ್ಠಿಯಿಂದ ದೇಶವನ್ನುರಕ್ಷಿಸುವ ಸಲುವಾಗಿ ಶಾಂತಿ ಪ್ರಿಯದೇಶದ ನಾಗರಿಕರೆಲ್ಲರೂ ಮುಂದೆ ಬರಬೇಕಾಗಿದೆ. ವೈಧ್ಯಮಯ ಸಂಸ್ಕೃತಿ ಹೊಂದಿರುವ ಭಾರತ ದೇಶದ ಭವಿಷ್ಯ ಉಳಿಸಿಕೊಳ್ಳಲು ಸವಾಲು ಎದುರಿಸಲು ಸಿದ್ಧರಾಗಬೇಕಿದೆ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮುಹಮ್ಮದ್ ತಾಹೇರ್, ಕಾರ್ಯದರ್ಶಿ ಅಸ್ಗರ್ ಅಹ್ಮದ್, ಎಂ.ಎಸ್.ರಫೀಕ್, ಇರ್ಫಾನ್, ಲಕ್ಷ್ಮಣ್ ಚೀರನಹಳ್ಳಿ ಮತ್ತಿತರರಿದ್ದರು.
ಮಾತಿನ ಚಕಮಕಿ: ಗಣೇಶ ಹಬ್ಬದ ದಿನದಂದು ಪ್ರತಿಭಟನೆ ನಡೆಸುವುದು ಬೇಡವೆಂದು ಪೊಲೀಸರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲಿಸರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆಗೆ ಅನುಮತಿ ಪಡೆದಿಲ್ಲವೆಂದು ಪೊಲಿಸರು ವಾದಿಸಿದರೆ, ದೇಶಾದ್ಯಂತ ಈ ಪ್ರತಿ ಭಟನೆ ನಡೆಯುತ್ತಿದ್ದು, ಅದರ ಭಾಗವಾಗಿ ನಾವು ಪ್ರತಿಭಟನೆ ಕೈಗೊಂಡಿದ್ದೇವೆಎಂದು ಪ್ರತಿಭಟನಾಕಾರರು ವಾದ ಮಂಡಿಸಿದರು.







