ಟೆಕ್ಸಾಸ್‌ಗೆ ಅಪ್ಪಳಿಸಿದ ಹಾರ್ವೆ

ಟೆಕ್ಸಾಸ್,ಆ.27: ಪ್ರಬಲವಾದ ಹಾರ್ವೆ ಚಂಡಮಾರುತವು ಅಮೆರಿಕದ ಟೆಕ್ಸಾಸ್ ಸಂಸ್ಥಾನದ ಕರಾವಳಿಗೆ ಶನಿವಾರ ಬೆಳಗ್ಗೆ ಅಪ್ಪಳಿಸಿದೆ. ಗಂಟೆಗೆ 195 ಕಿ.ಮೀ. ವೇಗದ ಗಾಳಿಯೊಂದಿಗೆ ಅಪ್ಪಳಿಸಿರುವ ಚಂಡಮಾರುತದಿಂದಾಗಿ ಟೆಕ್ಸಾಸ್‌ನ ತೈಲ ಸಂಸ್ಕರಣ ಕೈಗಾರಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ ಹಾಗೂ ಎರಡೂ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿದುಹೋಗಿದೆ.
ಟೆಕ್ಸಾಸ್ ಸಂಸ್ಥಾನದ ಅತ್ಯಂತ ಜನದಟ್ಟಣೆಯ ನಗರಗಳಲ್ಲೊಂದಾದ ಹ್ಯೂಸ್ಟನ್, ದೇಶದ ಅತಿ ದೊಡ್ಡ ತೈಲ ಸಂಸ್ಕರಣಾಗಾರ ಹಾಗೂ ಪೆಟ್ರೋ ರಾಸಾಯನಿಕ ಸಂಕೀರ್ಣಗಳನ್ನು ಹೊಂದಿದೆ.
ಚಂಡಮಾರುತ ಹಾರ್ವೆ ಕರಾವಳಿ ಪ್ರದೇಶದ ನೂರಾರು ಮರಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಬುಡಮೇಲುಗೊಳಿಸಿದೆ. ಚಂಡಮಾರುತದ ಭೀತಿಯಿಂದ ಸಾಗರತೀರದ ನೂರಾರು ನಿವಾಸಿಗಳು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.
ಟೆಕ್ಸಾಸ್‌ನಾದ್ಯಂತ ವಿಮಾನಗಳು ತಮ್ಮ ಹಾರಾಟವನ್ನು ರದ್ದುಪಡಿಸಿದ್ದು, ಶಾಲಾ,ಕಚೇರಿಗಳಿಗೆ ರಜೆ ಸಾರಲಾಗಿದೆ. ಹ್ಯೂಸ್ಟನ್ ಹಾಗೂ ಇತರ ಕರಾವಳಿ ಪ್ರದೇಶಗಳ ನಗರಗಳಲ್ಲಿ ಪೂರ್ವನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಹಾರ್ವೆ 2005ರ ಬಳಿಕ ಅಮೆರಿಕದ ಕರಾವಳಿಯನ್ನು ಅಪ್ಪಳಿಸಿದ ಅತ್ಯಂತ ಪ್ರಬಲವಾದ ಚಂಡಮಾರುತವೆಂದು ಹವಾಮಾನ ಇಲಾಖೆಯ ಹೇಳಿಕೆ ತಿಳಿಸಿದೆ.







