ಸೊರಬ: ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಎನ್.ಸಿಂಚನ ಆಯ್ಕೆ

ಸೊರಬ, ಆ.26: ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಅತೀವ ಸಂತೋಷ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ ತಿಳಿಸಿದರು.
ಶನಿವಾರ ಪಟ್ಟಣದ ಕೆಇಬಿ ಕಾಲನಿಯಲ್ಲಿರುವ ತಾಲೂಕು 2ನೆ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೆ ತರಗತಿ ವಿದ್ಯಾರ್ಥಿನಿ ಎನ್.ಸಿಂಚನ ಅವರ ನಿವಾಸದಲ್ಲಿ ತಾಲೂಕು ಕಸಾಪದಿಂದ ಅಧಿಕೃತ ಆಹ್ವಾನ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಚಿಕ್ಕವಯಸ್ಸಿನಲ್ಲೇ ಸಾಹಿತ್ಯಾಭಿರುಚಿ ಹೊಂದಿರುವ ಸಿಂಚನ ವಿವಿಧ ಕ್ಷೇರ್ತಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇನ್ನಿತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸಿಂಚನಾ ಮುಂದೆಯೂ ಸಹ ನಿರಂತರವಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಉನ್ನತಿಯನ್ನು ಹೊಂದಲಿ ಎಂದು ಹಾರೈಸಿದರು.
ತಾಲೂಕು ಕಸಾಪ ಅಧ್ಯಕ್ಷ ಹಾಲೇಶ್ ನವಲೆ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತರನ್ನಾಗಿ ಮಾಡಬಹುದಾಗಿದೆ. ಮೂರು ವರ್ಷಗಳ ಹಿಂದೆ ಮೊದಲನೆ ಸಾಹಿತ್ಯ ಸಮ್ಮೇಳನ ನಿಸರಾಣಿಯಲ್ಲಿ ನಡೆದಿತ್ತು. ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನವು ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆ.28ರಂದು ನಡೆಯಲಿದೆ ಎಂದ ಅವರು, ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ಸಿಂಚನಾಳ ಪೋಷಕರಾದ ನಾಗರಾಜ್ ಮತ್ತು ಲಕ್ಷ್ಮೀರವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಆರ್‍ಸಿ ಸಮನ್ವಯಾಧಿಕಾರಿ ಎಚ್.ಜಿ.ಆಂಜನೇಯ, ಬಿಆರ್‍ಪಿ ಶೇಖರ್ ನಾಯ್ಕ್, ರೋಟರಿ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಗುತ್ತಿ, ಅಭಾಸಾ ಪರಿಷತ್ ಅಧ್ಯಕ್ಷ ಶ್ರೀಪಾದ್ ಬಿಚ್ಚುಗತ್ತಿ, ಅಭಾಶಸಾ ಪರಿಷತ್ ಅಧ್ಯಕ್ಷ ಕೃಷ್ಣಾನಂದ್, ಕಜಾಪ ಘಟಕಾಧ್ಯಕ್ಷ ಎಸ್‍ಎಂ.ನೀಲೇಶ್, ಕಸಾಪ ಉಳವಿ ಘಟಕದ ಅಧ್ಯಕ್ಷ ಈ.ಶಿವಕುಮಾರ್, ಜಡೆ ಘಟಕದ ಅಧ್ಯಕ್ಷ ಮೃತ್ಯುಂಜಯ ಗೌಡ್, ತಾಲೂಕು ಗೌರವ ಕಾರ್ಯದರ್ಶಿ ದೀಪಕ್, ಕಾಳಿಂಗರಾಜ್, ಪಂಚಾಕ್ಷರಿ, ಕೆ.ಸಂಜಯ್, ಮುರುಗೇದ್ರಾಚಾರ್, ಡಿ.ಪ್ರಶಾಂತ್, ಶಿಕ್ಷಕರಾದ ಎಂ.ವಿರೂಪಾಕ್ಷಪ್ಪ, ಲತಾಮಣಿ, ಚಂದ್ರಪ್ಪ ಅತ್ತಿಕಟ್ಟಿ ಮತ್ತಿತರರಿದ್ದರು.







