ಕೊಹ್ಲಿ ಪಡೆಗೆ ಸರಣಿ ಗೆಲುವಿನ ಚಿತ್ತ
ನಾಳೆ ಶ್ರೀಲಂಕಾ ವಿರುದ್ಧ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯ

ಪಲ್ಲೆಕೆಲೆ, ಆ.26: ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಜಯಿಸಿರುವ ಟೀಮ್ ಇಂಡಿಯಾ ರವಿವಾರ ಇಲ್ಲಿ ನಡೆಯಲಿರುವ ಮೂರನೆ ಏಕದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಆದರೆ ಶ್ರೀಲಂಕಾ ಸರಣಿ ಗೆಲ್ಲಲು ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ.
ಎರಡನೆ ಏಕದಿನ ಪಂದ್ಯದಲ್ಲಿ 231 ರನ್‌ಗಳ ಸವಾಲನ್ನು ಪಡೆದಿದ್ದ ಭಾರತದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿದ್ದರೂ ಬಳಿಕ ಸ್ಪಿನ್ನರ್ ಅಖಿಲಾ ಧನಂಜಯ ದಾಳಿಗೆ ತತ್ತರಿಸಿತು. 131 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದರೂ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ವೇಗಿ ಭುವನೇಶ್ವರ ಕುಮಾರ್ ಹೋರಾಟದ ನೆರವಿನಲ್ಲಿ ಭಾರತ ಚೇತರಿಸಿಕೊಂಡು ಗೆಲುವಿನ ದಡ ಸೇರಿತ್ತು.
ಎಂಟನೆ ವಿಕೆಟ್‌ಗೆ ಭುವನೇಶ್ವರ ಕುಮಾರ್ ಮತ್ತು ಮಹೇಂದ್ರ ಸಿಂಗ್ ಧೋನಿ ಮುರಿಯದ ಜೊತೆಯಾಟದಲ್ಲಿ 100 ರನ್ ಸೇರಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.
ಭುವನೇಶ್ವರ ಕುಮಾರ್ ಔಟಾಗದೆ 53 ರನ್(80ಎ, 4ಬೌ,1ಸಿ) ಮತ್ತು ಧೋನಿ ಔಟಾಗದೆ 45 ರನ್(68ಎ, 1ಬೌ) ಗಳಿಸಿದ್ದರು.
ಟೀಮ್ ಇಂಡಿಯಾ ಪಲ್ಲೆಕೆಲೆಯಲ್ಲಿ ಏಕದಿನ ಕ್ರಿಕೆಟ್ ಆಡಿದ್ದು ಕಡಿಮೆ. ಗುರುವಾರ ಎರಡನೆ ಏಕದಿನ ಪಂದ್ಯವನ್ನಾಡಿತ್ತು. 2012ರಲ್ಲಿ ಮೊದಲ ಬಾರಿ ಭಾರತ ಇಲ್ಲಿ ಏಕದಿನ ಪಂದ್ಯವನ್ನಾಡಿತ್ತು. ಇನಿಂಗ್ಸ್ ಆರಂಭಿಸಿದ ಭಾರತದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 15.3 ಓವರ್‌ಗಳಲ್ಲಿ 109 ರನ್‌ಗಳ ಜೊತೆಯಾಟ ನೀಡಿದ್ದರು. ರೋಹಿತ್ ಶರ್ಮ 160ನೆ ಏಕದಿನ ಪಂದ್ಯದಲ್ಲಿ 12ನೆ ಅರ್ಧಶತಕ ದಾಖಲಿಸಿದ್ದರು. 54 ರನ್ (45ಎ,5ಬೌ,3ಸಿ) ಗಳಿಸಿದ್ದ ರೋಹಿತ್ ಶರ್ಮರನ್ನು ಅಖಿಲಾ ಧನಂಜಯ ಎಲ್ಬಿಡಬ್ಲು ಬಲೆಗೆ ಕೆಡವಿದ್ದರು. ಇದರೊಂದಿಗೆ ಭಾರತದ ಮೊದಲ ವಿಕೆಟ್ ಕಿತ್ತುಕೊಂಡಿದ್ದರು. ಅಪೂರ್ವ ಫಾರ್ಮ್‌ನಲ್ಲಿರುವ ಶಿಖರ್ ಧವನ್‌ಗೆ ಅರ್ಧಶತಕ ದಾಖಲಿಸಲು ಸಾಧ್ಯವಾಗಿರಲಿಲ್ಲ. ಅವರು 49 ರನ್ (50ಎ, 6ಬೌ,1ಸಿ) ಗಳಿಸಿ ಸಿರಿವರ್ಧನ ಎಸೆತದಲ್ಲಿ ಮ್ಯಾಥ್ಯೂಸ್‌ಗೆ ಕ್ಯಾಚ್ ನೀಡಿದ್ದರು. ಇದರೊಂದಿಗೆ ಧವನ್‌ಗೆ 88ನೆ ಪಂದ್ಯದಲ್ಲಿ 22ನೆ ಅರ್ಧಶತಕ ತಪ್ಪಿತ್ತು.
ಕೇದಾರ್ ಜಾಧವ್(1)ರನ್ನು ಪೆವಿಲಿಯನ್‌ಗೆ ಅಟ್ಟಿದ ಧನಂಜಯ ಪ್ರಹಾರ ಮುಂದುವರಿಸಿದರು. ಅನಂತರ ವಿರಾಟ್ ಕೊಹ್ಲಿ(4), ಲೋಕೇಶ್ ರಾಹುಲ್ (4), ಹಾರ್ದಿಕ್ ಪಾಂಡ್ಯ(0), ಅಕ್ಷರ್ ಪಟೇಲ್(6)ರನ್ನು ಪೆವಿಲಿಯನ್‌ಗೆ ಅಟ್ಟಿದ ಧನಂಜಯ ಭಾರತವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ಮುಂದೆ ಧೋನಿ ಮತ್ತು ಭುವನೇಶ್ವರ ಬ್ಯಾಟಿಂಗ್‌ನ್ನು ಮುರಿಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಶ್ರೀಲಂಕಾ ಕೈಸುಟ್ಟುಕೊಂಡಿತು.
ಕಳೆದ ಪಂದ್ಯದಲ್ಲಿ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 236 ರನ್ ಗಳಿಸಿತ್ತು.
ಸಿರಿವರ್ಧನ 58 ರನ್(58ಎ, 2ಬೌ,1ಸಿ) ಮತ್ತು ಚಾಮರಾ ಕಪುಗೆಡೆರಾ 40 (61ಎ, 2ಬೌ) ರನ್ ಗಳಿಸಿ ಲಂಕಾದ ಸ್ಕೋರ್ 200ರ ಗಟಿ ದಾಟಿಸಲು ನೆರವಾಗಿದ್ದರು. ಶ್ರೀಲಂಕಾದ ಮಿಲಿಂದಾ ಸಿರಿವರ್ಧನ ಮತ್ತು ಚಾಮರಾ ಕಪುಗಡೆರಾ 6ನೆ ವಿಕೆಟ್‌ಗೆ ದಾಖಲಿಸಿದ್ದ 91 ರನ್‌ಗಳ ಜೊತೆಯಾಟದ ನೆರವಿನಲ್ಲಿ ಶ್ರೀಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಸಾಧ್ಯವಾಗಿತ್ತು.
<ತಂಡದ ಸಮಾಚಾರ: ಶ್ರೀಲಂಕಾ ತಂಡದ ನಾಯಕ ಉಪುಲ್ ತರಂಗ ಅವರು ನಿಧಾನಗತಿಯ ಬೌಲಿಂಗ್ ಕಾರಣಕ್ಕಾಗಿ ಎರಡು ಏಕದಿನ ಪಂದ್ಯಗಳಿಂದ ದೂರ ಉಳಿಯುವಂತಾಗಿದೆ. ಚಾಮರ ಕಪುಗಡೆರಾ ತಂಡವನ್ನು ನಾಯಕರಾಗಿ ಮುನ್ನಡೆಸುವರು. ಚಾಂಡಿಮಾಲ್ ನಂ.4 ಸರದಿಯಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಗಾಯಾಳು ಗುಣತಿಲಕ ಬದಲಿಗೆ ತಿರಿಮನ್ನೆ ಅವಕಾಶ ಪಡೆದಿದ್ದಾರೆ.
ಭಾರತದ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರು. ಅವರು ಮೂರನೆ ಏಕದಿನ ಪಂದ್ಯಕ್ಕೆ ಲಭ್ಯರಿರುವುದಾಗಿ ತಂಡದ ಮೂಲಗಳು ತಿಳಿಸಿವೆ. ಇನ್ನುಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ.
<ಸಂಭಾವ್ಯ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಲೋಕೇಶ್ ರಾಹುಲ್, ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ಯಜ್ವೇಂದ್ರ ಚಾಹಲ್.
<ಶ್ರೀಲಂಕಾ: ಚಾಮರಾ ಕಪುಗೆಡೆರಾ (ನಾಯಕ), ನಿರೋಶನ್‌ಡಿಕ್ವೆಲ್ಲಾ(ವಿಕೆಟ್ ಕೀಪರ್), ಲಹಿರು ತಿರಿಮನ್ನೆ, ಕುಶಾಲ್ ಮೆಂಡಿಸ್, ದಿನೇಶ್ ಚಾಂಡಿಮಾಲ್, ಆ್ಯಂಜೆಲೊ ಮ್ಯಾಥ್ಯೂಸ್, ಮಿಲಿಂದಾ ಸಿರಿವರ್ಧನ, ಅಖಿಲ ಧನಂಜಯ, ದುಶ್ಮಂತ ಚಾಮೀರಾ, ವಿಶ್ವ ಫೆರ್ನಾಂಡೊ, ಲಸಿತ್ ಮಾಲಿಂಗ.







