ಮೈಸೂರಿನಿಂದ ನಾಪತ್ತೆಯಾದ ಯುವಕ ಕೊಟ್ಟಿಗೆಹಾರದಲ್ಲಿ ಪತ್ತೆ
ಕೊಟ್ಟಿಗೆಹಾರದಲ್ಲಿ ಮಾನವೀಯತೆ ಮೆರೆದ ಸ್ಥಳೀಯರು

ಬಣಕಲ್, ಆ.27: ಮೈಸೂರಿನ ವಿಜಯನಗರದ ಮನೆಯಿಂದ ಶುಕ್ರವಾರ ನಾಪತ್ತೆಯಾಗಿದ್ದ ದರ್ಶನ್ ಎಂಬ ಯುವಕನನ್ನು ಮರಳಿ ಮನೆಗೆ ಸೇರಿಸಿದ ಮಾನವೀಯ ಘಟನೆ ಶನಿವಾರ ಸಂಜೆ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಮೈಸೂರಿನಿಂದ ಮನೆ ಬಿಟ್ಟು ಬಂದ ದರ್ಶನ್ ಶುಕ್ರವಾರ ರೈಲಿನಲ್ಲಿ ಹಾಸನಕ್ಕೆ ಬಂದು ಧರ್ಮಸ್ಥಳಕ್ಕೆ ಬಸ್‍ನಲ್ಲಿ ಪ್ರಯಾಣಿಸುತ್ತಾನೆ. ಈ ನಡುವೆ ಕೊಟ್ಟಿಗೆಹಾರಕ್ಕೆ ಬಂದು ಧರ್ಮಸ್ಥಳದತ್ತ ತೆರಳಲು ಸ್ಥಳೀಯರಲ್ಲಿ ಹಣ ಯಾಚಿಸಿದಾಗ ಮುನೀರ್, ತಫ್ಝುಲ್ ಹುಸೈನ್ ಹಾಗೂ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಯುವಕನ ಬಳಿ ವಿಚಾರಿಸಿದ್ದಾರೆ. ಕೇವಲ 140 ರೂ. ಹಣಕ್ಕೆ ಕೇಳಿದ್ದ ದರ್ಶನ್ ಯಾಕೆ ಮನೆ ಬಿಟ್ಟ ಎಂದು ವಿಚಾರಿಸಿದರೆ ಆತ ಹೇಳಲು ನಿರಾಕರಿಸಿದ.
ಈ ಹೊತ್ತಿಗೆ ಸ್ಥಳೀಯರಾದ ತನು ಎಂಬವರು ಹುಡುಗನ ಮೊಬೈಲ್ ಪಡೆದು ಆತನ ಮನೆಯ ನಂಬರ್‍ಗೆ ಕರೆ ಮಾಡಿ ವಿಚಾರಿಸಿದಾಗ ಸತ್ಯಾಂಶ ತಳಿದು ಬಂದಿದೆ. ತಕ್ಷಣ ಹುಡುಗ ನಿಂತು ಮಾತನಾಡುತ್ತಿದ್ದಂತೆ ಮೊಬೈಲ್ ಬಿಟ್ಟು ಅಲ್ಲಿಂದ ಪರಾರಿಯಾಗಿ ಚಾರ್ಮಾಡಿ ಘಾಟ್‍ನಲ್ಲಿ ಮಳೆಯ ನಡುವೆಯೇ ನಡೆದು ಸಾಗಿದ್ದಾನೆ. ಅಂಬೇಡ್ಕರ್ ಸಂಘದ ಯುವಕರಾದ ಜಯಪಾಲ್, ಕಿರಣ್‍ಬಿನ್ನಡಿ, ಬಿ.ಬಿ.ಪ್ರದೀಪ್, ಸ್ಥಳೀಯರಾದ ಕುಂಜಿಮೋಣು ಆಸುಪಾಸಿನಲ್ಲಿ ಹುಡುಕಾಟ ನಡೆಸಿದರು.
ನಂತರದ ಮೂರು ಗಂಟೆಗೆ ಚಾರ್ಮಾಡಿ ಘಾಟಿಯ ಜೇನುಕಲ್ಲು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಬಳಿ ನಡೆದುಕೊಂಡು ಸಾಗುತ್ತಿದ್ದ ದರ್ಶನ್‍ನನ್ನು ಪತ್ತೆ ಹಚ್ಚಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಸೈ ಮೂರ್ತಿ, ಮುಖ್ಯ ಪೇದೆ ಬಾಬು ಅವರಿಗೆ ಆತನನ್ನು ಅವರ ಅಧೀನದಲ್ಲಿ ಇರಿಸಿ ಅವರ ಪೋಷಕರು ಮೈಸೂರಿನಿಂದ ಬರುವವರೆಗೆ ಪೊಲೀಸ್ ಠಾಣೆಯಲ್ಲಿ ಇರಿಸಲಾಯಿತು. ನಂತರ ಯುವಕನ ಪೋಷಕರು ಶನಿವಾರ ಸಂಜೆ ಬಂದ ಬಳಿಕ ಆತನನ್ನು ಪೊಲೀಸರ ಸಮ್ಮುಖದಲ್ಲಿ ಪೋಷಕರಿಗೆ ಒಪ್ಪಿಸಲಾಯಿತು.







