ಮೂಡುಬಿದಿರೆ : ನೇತ್ರಾವತಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ

ಮೂಡುಬಿದಿರೆ,ಆ.27: ಚೀನೀ ಉತ್ಪಾದಿತ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನೇ ಬಳಸುವುದು ದೇಶದ ಆರ್ಥಿಕ ಸದೃಢತೆಗೆ ಅಗತ್ಯವಾಗಿದೆ ಎಂದು ಯುವ ನ್ಯಾಯವಾದಿ ಹಾಗೂ ವಂದೇ ಮಾತರಂನ ನಿರ್ದೇಶಕರೂ ಆಗಿರುವ ಕು. ಸುಚಿತಾ ಅವರು ನುಡಿದರು.
ಅವರು ಬೆಳುವಾಯಿ ಗೋಕುಲಾಡಿಯ ನೇತ್ರಾವತಿ ಸ್ವ ಸಹಾಯ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವದೇಶೀ ಸುರಕ್ಷಾ ಅಭಿಯಾನದ ಬಗ್ಗೆ ವಿವರಗಳನ್ನಿತ್ತ ಅವರು ಮಾತೆಯರು ಸ್ವಾವಲಂಬಿಗಳಾಗುವುದರ ಜತೆಗೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿ ಬೆಳೆಸುವ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದರು.
ಕೋಟಿ ಚೆನ್ನಯ್ಯ ಸ್ವಸಹಾಯ ಸಂಘದ ಪ್ರಬಂಧಕರಾದ ವಿದ್ಯಾ ನಾಯಕ್ ಅವರು ವಾರ್ಷಿಕೋತ್ಸವವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದರು. ಆಶಾಕಿರಣ ಬಳಗದ ಸಂಗೀತಾ ಅವರು ಮುಖ್ಯ ಅತಿಥಿಗಳಾಗಿದ್ದರು. ಸ್ಥಳೀಯ ವಿಕಲ ಚೇತನ ಯುವತಿ ಅಶ್ವಿನಿಯವರಿಗೆ ಸಹಾಯಧನ, ಸೀರೆ ಉಡುಗೊರೆ ನೀಡಿ ಸಮ್ಮಾನಿಸಲಾಯಿತು. ಸ್ವಸಹಾಯ ಸಂಘಗಳ ಮೇಲ್ವಿಚಾರಕ ಅಶೋಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಯಶ್ರೀ ವರದಿ ವಾಚಿಸಿದರು. ಆಶಾ ಸ್ವಾಗತಿಸಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







