ಬೆಂಗಳೂರು: ರೌಡಿಶೀಟರ್ ಮೋಹನ್ ಕುಮಾರ್ ಹತ್ಯೆ

ಬೆಂಗಳೂರು, ಆ.27: ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳ ತಂಡವೊಂದು ರೌಡಿ ಶೀಟರ್ ಮೋಹನ್ ಕುಮಾರ್(ಮೋನಿ)ನನ್ನು ಹತ್ಯೆ ಮಾಡಿರುವ ಘಟನೆ ಜಾಲಹಳ್ಳಿಯ ಬಾಹುಬಲಿ ನಗರದಲ್ಲಿ ನಡೆದಿದೆ.
ವಿದ್ಯಾರಣ್ಯಪುರದ ಮೋಹನ್ ಕುಮಾರ್(33) ಶನಿವಾರ ಸಂಜೆ ಬಾಹುಬಲಿ ನಗರದ ಹೊಯ್ಸಳ ವೃತ್ತಕ್ಕೆ ಬಂದಿದ್ದಾಗ ಆರೋಪಿಗಳಾದ ಚಿನ್ನಿ, ಅಜಯ್ ಕುಮಾರ್, ಅಜಿತ್ ಸೇರಿ ನಾಲ್ವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗಿದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಮಾರಕಾಸ್ತ್ರಗಳಿಂದ ಮೋಹನ್ ಕುಮಾರ್‌ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಗಂಗಮ್ಮನಗುಡಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಆರೋಪಿ ಮೋಹನ್‌ಕುಮಾರ್ ಹೊಡೆದಾಟ, ಸುಲಿಗೆ ಸೇರಿದಂತೆ 6 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 2011ರಿಂದ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೆ ಗಂಗಮ್ಮನಗುಡಿಯಿಂದ ವಿದ್ಯಾರಣ್ಯಪುರಕ್ಕೆ ಮನೆ ಬದಲಾಯಿಸಿ ಅಪರಾಧ ಕೃತ್ಯಗಳಿಂದ ದೂರವಿದ್ದ. ಆದರೆ, ಯಾವುದೇ ಕೆಲಸ ಮಾಡದೆ ತಂದೆಯ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಈತನ ಕೊಲೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಆರೋಪಿಗಳ ಸುಳಿವು ಆಧರಿಸಿ ಬಂಧನ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







