ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಒತ್ತು: ಶಾಸಕ ಉಮೇಶ್ ಜಾಧವ್
ಕಲಬುರಗಿ, ಆ. 27: ಬಂಜಾರ ಭಾಷೆ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.
ರವಿವಾರ ಗುಲಬರ್ಗಾ ವಿವಿಯ ಸಂತ ಶ್ರೀ ಸೇವಾಲಾಲ್ ಅಧ್ಯಯನ ಪೀಠ ಹಾಗೂ ಪರ್ಯಾಯ ಸಮಾಜಕಾರ್ಯ ಮಹಾವಿದ್ಯಾಲಯ ಮತ್ತು ಹಮ್ ಗೋರ್ ಕಟಮಾಳೋ ಸಂಘಟನೆ ಆಯೋಜಿಸಿದ್ದ ರಾಜ್ಯಮಟ್ಟದ ಬಂಜಾರ ಯುವ ಚಿಂತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ತಾಂಡಾಗಳಲ್ಲಿ ಈಗಲು ಬಡತನ, ಅನಕ್ಷರತೆ ತಾಂಡವಾಡುತ್ತಿದೆ. ಬಂಜಾರರ ಮೂಲಬೇರುಗಳನ್ನು ರಕ್ಷಿಸಬೇಕಿದೆ. ಇಂತಹ ಶಿಬಿರಗಳು ಬಂಜಾರರ ಸಮಸ್ಯೆಗಳ ಕುರಿತು ಚರ್ಚಿಸಲು ಸಹಾಯಕ. ಶಿಬಿರದಲ್ಲಿ ಚರ್ಚಿತ ವಿಷಯಗಳ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಬುಡಕಟ್ಟು ಆಯೋಗದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೇಣುಕೆ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಮಹಾರಾಜರ ವಿಚಾರಧಾರೆಗಳನ್ನು ಬಂಜಾರ ಸಮುದಾಯ ಅನುಸರಿಸುತ್ತಿರುವುದು ಶ್ಲಾಘನೀಯ. ದೇಶದಲ್ಲಿ ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಲು ಇವರ ವಿಚಾರಧಾರೆಗಳು ಪೂರಕವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಸ್ ರಾಥೋಡ್, ವಕೀಲ ಅನಂತ್ ನಾಯ್ಕ, ರಾಷ್ಟ್ರೀಯ ಕಾನೂನು ಶಾಲೆಯ ಅಧ್ಯಾಪಕ ಪ್ರದೀಪ್ ರಾಮಾವತ್ ಸೇರಿದಂತೆ ಇತರರು ಇದ್ದರು.







