‘ಮನೆ ಮನೆಗೆ ಕಾಂಗ್ರೆಸ್’ ಸೆಪ್ಟಂಬರ್‌ನಲ್ಲಿ ಅಭಿಯಾನ
ರಾಜ್ಯ ಸರಕಾರದ ಯೋಜನೆಗಳ ಪ್ರಚಾರ

ಬೆಂಗಳೂರು, ಆ. 27: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ನಾಲ್ಕೂವರೆ ವರ್ಷದ ಸಾಧನೆ ಹಾಗೂ ಜನಪರ ಯೋಜನೆಗಳ ಬಗ್ಗೆ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನವನ್ನು ಸೆಪ್ಟಂಬರ್‌ನಿಂದ ಆರಂಭಿಸಲು ಕಾಂಗ್ರೆಸ್ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಸಿದ್ಧತೆ ನಡೆಸಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಬೂತ್ ಮಟ್ಟದ ಸದಸ್ಯರ ಮೂಲಕ ರಾಜ್ಯದಲ್ಲಿರುವ ಪ್ರತೀ ಮನೆಗೂ ಕಾಂಗ್ರೆಸ್ ಅಭಿಪ್ರಾಯ ಮುಟ್ಟಿಸಲು ಕಾಂಗ್ರೆಸ್ ಯೊಜನೆ ರೂಪಿಸಿದೆ. ಅಭಿಯಾನದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೆಶ್ವರ್ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದು, ಜಿಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದು, ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಕೈ ಕಾರ್ಯಕರ್ತರು ರಾಜ್ಯ ಸರಕಾರ ಸಾಧನೆಯ ಕೈಪಿಡಿಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ.
ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರಕಾರದ ಭ್ರಷ್ಟಾಚಾರಗಳನ್ನು ಒಳಗೊಂಡ ಕಿರುಹೊತ್ತಗೆಯನ್ನು ಮುದ್ರಿಸಲಾಗಿದ್ದು, ಅವುಗಳನ್ನು ಜನ ಸಾಮಾನ್ಯರಿಗೆ ಹಂಚಿಕೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಅಭಿಯಾನದಲ್ಲಿ ರೈತರ ಸಾಲಮನ್ನಾ, ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೊಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಮನಸ್ವಿನಿ, ಕೃಷಿಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ಕೇಂದ್ರ ಸರಕಾರದ ರೈತರ ವಿರೋಧಿ ನೀತಿ ಹಾಗೂ ಕೇಂದ್ರದ ಆಡಳಿತ ವೈಫಲ್ಯವನ್ನು ವಿರೋಧಿಸಿ ಪ್ರಚಾರ ನಡೆಸಲಾಗುವುದು.
ಸೆಪ್ಟಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್‌ವರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಈ ಆಂದೋಲನದಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ, ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇನ್ನಿತರ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸಲು ಕೆಪಿಸಿಸಿ ಮುಂದಾಗಿದೆ.







