ಸಿಎಂ ಸಿದ್ದರಾಮಯ್ಯನವರಿಗೆ ಕಂಬಳಿ-ಕುರಿ ಉಡುಗೊರೆ!

ಬೆಂಗಳೂರು, ಆ. 27: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಯಚೂರು ಮೂಲದ ಅವರ ಅಭಿಮಾನಿಯೊಬ್ಬ ಕರಿ ಕಂಬಳಿ ಹಾಗೂ ಕುರಿಯೊಂದನ್ನು ಉಡುಗೊಡೆಯಾಗಿ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ತೀವ್ರ ಅಚ್ಚರಿ, ಕುತೂಹಲ ಸೃಷ್ಟಿಸಿದ್ದಾನೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕುರುಬರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಸಮುದಾಯದ ಎಸೆಸೆಲ್ಸಿ-ಪಿಯುಸಿ, ಯುಪಿಎಸ್ಸಿ-ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಿಎಂಗೆ ಉಡುಗೊರೆ ನೀಡಲಾಗಿದೆ.
ರಾಯಚೂರು ಮೂಲದ ಅಭಿಮಾನಿ ಹಾಗೂ ಸಮುದಾಯದ ಕೆ.ಆಂಜನೇಯ ಎಂಬುವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರಿ, ಕರಿ ಕಂಬಳಿ ಹಾಗೂ ಪೇಟ ತೊಡಿಸಿ ಅಭಿನಂದಿಸಿದರು. ಮೊದಲು ಅವರನ್ನು ವೇದಿಕೆಗೆ ಬರದಂತೆ ತಡೆದರು. ಆದರೆ, ಇವರನ್ನು ಕಂಡ ಸಿಎಂ ಕೂಡಲೇ ವೇದಿಕೆಗೆ ಬರಲು ಅವಕಾಶ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಸಂತೋಷದಿಂದ ವೇದಿಕೆ ಏರಿದ ಆಂಜನೇಯ ಕುರಿಮರಿ, ಕಂಬಳಿ, ಪೇಟ ತೊಡಿಸಿ, ಗೌರವಿಸಿ ಸಂಭ್ರಮಿಸಿದರು.
ಕೇಂದ್ರದಿಂದ ಸಮಾಜ ಒಡೆಯುವ ಕೆಲಸ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸದೆ ಮೀಸಲಾತಿ ಕೆನೆಪದರ ರಚನೆಗೆ ಮುಂದಾಗುವ ಮೂಲಕ ಕೇಂದ್ರ ಸರಕಾರ ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಅರ್ಜಿ ಹಾಕಿರಲಿಲ್ಲ: ತಾನು ಕುರುಬ ಸಮುದಾಯದಲ್ಲಿ ಹುಟ್ಟಿದ್ದು ಆಕಸ್ಮಿಕ. ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕುವುದಿಲ್ಲ. ಆಕಸ್ಮಿಕವಾಗಿ ಹುಟ್ಟಿದ್ದೇವೆ ಅಷ್ಟೇ. ಅವಕಾಶ ವಂಚಿತರಿಗೆ ಅವಕಾಶ ಒದಗಿಸಬೇಕು. ಎಲ್ಲ ಧರ್ಮ, ಜಾತಿಯವರಿಗೆ ನಾನು ಸಿಎಂ. 6.5 ಕೋಟಿ ಜನರಿಗೆ ನಾನು ಒಂದಲ್ಲಾ ಒಂದು ಯೋಜನೆ ಕೊಟ್ಟಿದ್ದೇನೆ. ಆದರೂ ನನ್ನನ್ನು ಅಹಿಂದ ಸಿಎಂ ಎಂದು ಮೂದಲಿಸುತ್ತಾರೆ. ಅಹಿಂದ ಪರ ಎಂದು ಹೇಳಿಕೊಳ್ಳಲು ನನಗೆ ಮುಜುಗರವಿಲ್ಲ. ನಾನು ಬಡವರ ಪರ ಎಂದು ಸಿದ್ದರಾಮಯ್ಯ ಹೇಳಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಂತ ಹೋದರೆ ಏನೂ ಆಗುವುದಿಲ್ಲ. ತಾನು ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದು ರಾಯಣ್ಣ ಬ್ರಿಗೇಡ್ ಸಂಚಾಲಕ ಹಾಗೂ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರನ್ನು ಕುರಿತು ಪ್ರತಿಕ್ರಿಯೆ ನೀಡಿದರು. ಕೆಲದಿನಗಳ ಕಾಲ ಅತ್ಯಂತ ಉತ್ಸಾಹ-ಚಟುವಟಿಕೆಯಿಂದ ಇದ್ದ ರಾಯಣ್ಣ ಬ್ರಿಗೇಡ್ ಅದ್ಯಾಕೋ ಈಗ ನಿಷ್ಕೃಿಯಗೊಂಡಿದೆ. ಆದರೆ, ರಾಜ್ಯ ಸರಕಾರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ಆರಂಭಿಸುತ್ತಿದ್ದೇವೆ. ಆ ಕಾರ್ಯಕ್ಕೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ಮನವಿ: ಇದೇ ವೇಳೆ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಕುರುಬರ ಸಂಘದಿಂದ ಸಿಎಂ ಸಿದ್ದರಾಮಯ್ಯನವರಿಗೆ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಆಧರಿಸಿ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದು, ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
-ಸಿದ್ದರಾಮಯ್ಯ, ರಾಜ್ಯ ಮುಖ್ಯಮಂತ್ರಿ







