ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗ ವರಪ್ರಸಾದ್ ರೆಡ್ಡಿ ಬಿಜೆಪಿಗೆ ಸೇರ್ಪಡೆ
ಬೆಂಗಳೂರು, ಆ.27: ಕೆಪಿಸಿಸಿಯ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ವರಪ್ರಸಾದ್ ರೆಡ್ಡಿ ಅವರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರೆಡ್ಡಿ ಅವರಿಗೆ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ರವಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೆಡ್ಡಿ ಅವರೊಂದಿಗೆ ಉತ್ತರಹಳ್ಳಿ 184ನೆ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿಗೆ ವಿದ್ಯುಕ್ತವಾಗಿ ಸೇರ್ಪಡೆಯಾದರು. ಇದೇ ವೇಳೆ ನಿವೃತ್ತ ಉಪ ಪೊಲೀಸ್ ಆಯುಕ್ತ ಧರ್ಮಯ್ಯ ಮತ್ತು ನಿವೃತ್ತ ಅಧಿಕಾರಿ ಎಂ.ಪಿ. ನಾರಾಯಣಸ್ವಾಮಿ ಪಕ್ಷಕ್ಕೆ ಸೇರಿದರು.
ದೊಡ್ಡ ಸಾಲೇ ಇದೆ: ಪಕ್ಷಕ್ಕೆ ಮುಖಂಡರನ್ನು ಬರಮಾಡಿಕೊಂಡ ಬಳಿಕ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆ ಆಗುವವರ ದೊಡ್ಡ ಸಾಲೇ ಇದೆ. ಮುಂಬರುವ ದಿನಗಳಲ್ಲಿ ಅಚ್ಚರಿಯಾಗುವಂತೆ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತರ ಜಿಲ್ಲೆಗಳಲ್ಲಿಯೂ ಪಕ್ಷ ಸೇರುವವರನ್ನು ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರನ್ನು ಸೇರಿಸಿಕೊಂಡು ಪಕ್ಷದ ಶಕ್ತಿಯನ್ನು ವೃದ್ಧಿಸಬೇಕು ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸರಕಾರಿ ಖಜಾನೆಯ ಹಗಲು ದರೋಡೆ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ತೊಲಗಿಸಿ, ಕನಿಷ್ಟ 150 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲ್ಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಯಡಿಯೂರಪ್ಪ ಸಲಹೆ ಮಾಡಿದರು.
ಪ್ರಧಾನಿ ಮೋದಿ, ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರ ಅಪೇಕ್ಷೆಯಂತೆ ಕಾಂಗ್ರೆಸ್ ಆಡಳಿತವಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಿದರೆ ಕಾಂಗ್ರೆಸ್ ಮುಕ್ತ ಭಾರತ ಸಾಕಾರವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ರವಿಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







