ರಸ್ತೆಗೆ ಬಾಳೆ ಗಿಡ ನೆಟ್ಟು ವಿನೂತನ ಪ್ರತಿಭಟನೆ

ಸಕಲೇಶಪುರ,ಆ.27: ಇಲ್ಲಿಯ ಪುರಸಭೆ ವ್ಯಾಪ್ತಿ ಕುಶಾಲನಗರ ಬಡಾವಣೆಯ ಮುಖ್ಯರಸ್ತೆ ಸೇರಿ ವಿವಿಧ ರಸ್ತೆಗಳು ಹದಗೆಟ್ಟಿದ್ದು, ಪುರಸಭಾ ಆಡಳಿತ ಕ್ರಮಕ್ಕೆ ಮುಂದಾಗಿಲ್ಲ ಎಂದು ರಸ್ತೆಗೆ ಬಾಳೆ ಗಿಡ ನೆಟ್ಟು ಗುರುವಾರ ವಿನೂತನ ಪ್ರತಿಭಟನೆ ನಡೆಯಿತು. ಎಸ್ ಡಿ ಪಿ ಐ ಕಾರ್ಯಕರ್ತರು ರಸ್ತೆಯ ಗುಂಡಿಗಳಿಗೆ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು.
ಈ ರಸ್ತೆಯು ಐದು ವರ್ಷಗಳಿಂದ ಹಾಳಾಗಿದೆ. ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆದರೂ ಪುರಸಭೆ ಆಡಳಿತ ಕ್ರಮಕೈಗೊಂಡಿಲ್ಲ ಎಂದು . ಎಸ್ ಡಿ ಪಿ ಐ ಮುಖಂಡ ಮಲ್ನಾಡ್ ಹನೀಫ್ ಆರೋಪಿಸಿದರು.
ಪುರಸಭಾ ಸದಸ್ಯರು ರಸ್ತೆ ಅಭಿವೃದ್ಧಿ ವಿಷಯದಲ್ಲಿ ವಿಫಲರಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ವಾರ್ಡಿನ ಮಹಿಳೆಯರೂ ಸೇರಿದಂತೆ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದರು. ಆಗ ವಾರ್ಡ್ ಸದಸ್ಯರು, ಅಧ್ಯಕ್ಷರು, ಹಿಂದಿನ ಮುಖ್ಯಾಧಿಕಾರಿ ತಿಂಗಳಲ್ಲಿ ಒಳಗೆ ರಸ್ತೆ ಕಾಮಗಾರಿ ನಿರ್ವಹಿಸುವುದಾಗಿ ಭರವಸೆ ನೀಡಿದ್ದರು.
ಗೌರಿ-ಗಣೇಶ ಹಬ್ಬ ನಡೆಯುತ್ತಿದ್ದು, ಮನೆ ಮುಂದಿನ ರಸ್ತೆ ಗುಂಡಿಬಿದ್ದು ಸಂಚರಿಸಲು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ, ಇಂಜಿನಿಯರ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಎರಡು ದಿನಗಳ ಒಳಗೆ ಗುಂಡಿಗಳಿಗೆ ಜಲ್ಲಿ ಹಾಕಿ ತಾತ್ಕಾಲಿಕ ಪರಿಹಾರ ಒದಗಿಸಲು ಒತ್ತು ನೀಡಲಾಗುವುದು ಎಂದು ಆದಿಕಾರಿಗಳು ಭರವಸೆ ನೀಡಿದರು.







