ದೇಶದಲ್ಲಿ ಅಭದ್ರತೆ ವಾತಾವರಣ ಹೆಚ್ಚಳ: ಅರವಿಂದ ಜತ್ತಿ
ಬೆಂಗಳೂರು, ಆ.26: ದೇಶದಲ್ಲಿ ಅಭದ್ರತೆ ಹಾಗೂ ಅವಿಶ್ವಾಸದ ವಾತಾವರಣ ಹೆಚ್ಚಾಗುತ್ತಿದೆ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಧರ್ಮದ, ವರ್ಗದ, ಭಾಷೆಯ ಪ್ರಮುಖರು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದ್ದಾರೆ.
ರವಿವಾರ ಬಸವ ಸಮಿತಿ ನಗರದ ದಾರುಸ್ಸಲಾಮ್ ಕಟ್ಟಡದಲ್ಲಿ ಆಯೋಜಿಸಿದ್ದ 'ರಾಷ್ಟ್ರೀಯ ಭಾವೈಕ್ಯತಾ ವಚನ ಶ್ರಾವಣ-2017' ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಹತ್ತು ವರ್ಷಗಳ ಕಾಲ ಉಪರಾಷ್ಟ್ರಪತಿಗಳಾಗಿದ್ದ ಅಮಿದ್ ಅನ್ಸಾರಿ ತಮ್ಮ ಅಧಿಕಾರವಧಿಯ ಕೊನೆಯ ಭಾಷಣದಲ್ಲಿ ದೇಶದಲ್ಲಿ ಅಭದ್ರತೆಯ ವಾತಾವರಣ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅತ್ಯುನ್ನತ ಅಧಿಕಾರವನ್ನು ಹೊಂದಿದ್ದವರೇ ಈ ರೀತಿಯ ಆತಂಕ ವ್ಯಕ್ತಪಡಿಸುವಂತಾದರೆ ಇನ್ನು ಜನ ಸಾಮಾನ್ಯರ ಮನಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ ಎಂದು ಅವರು ವಿಷಾದಿಸಿದರು.
ಸಮಾನತೆಯ ಹರಿಕಾರ ಬಸವಣ್ಣ ಹುಟ್ಟಿದ ನಾಡಿನಲ್ಲಿ ಅಭದ್ರತೆಯ ವಾತಾವರಣ ಹೆಚ್ಚಾಗುತ್ತಿರುವುದು ಖೇದಕರ ಸಂಗತಿಯಾಗಿದೆ. 12ನೆ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕಾಗಿ ಹಲವು ರೀತಿಯ ಹಿಂಸೆ ಹಾಗೂ ಅವಮಾನಗಳನ್ನು ಎದುರಿಸಿ ನಿರ್ಮಿಸಿದ್ದ ಸೌಹಾರ್ದಯುತ ವಾತಾವರಣ ಕೇವಲ 21ನೆ ಶತಮಾನದ ಹೊತ್ತಿಗೆ ನಿರ್ಣಾಮವಾಗುತ್ತಿರುವುದರ ಕುರಿತು ಗಂಭೀರವಾಗಿ ಚಿಂತಿಸುವ ಮೂಲಕ ಪರಿಹಾರೋಪಯಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಾನವೀಯ ಮೌಲ್ಯಗಳು ಇರಬೇಕಾದ ಜಾಗದಲ್ಲಿ ಸಂಕುಚಿತತೆ, ಸ್ವಾರ್ಥ ಮನಸ್ಥಿತಿಗಳೇ ತುಂಬಿಕೊಂಡಿವೆ. ಇದಿರಿಂದಾಗಿ ಧರ್ಮಗಳಲ್ಲಿರುವ ಮಾನವೀಯ ಮೌಲ್ಯಗಳು, ಪ್ರೀತಿ, ವಿಶ್ವಾಸಗಳು ಕಾಣದಾಗಿದೆ. ಇಂತಹ ಸ್ಥಿತಿಯಲ್ಲಿ ಭಿನ್ನ ಧರ್ಮಗಳನ್ನು ಅರ್ಥ ಮಾಡಿಕೊಳ್ಳುವಂತಹ ಸೌಹಾರ್ದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಆ ಮೂಲಕ ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳನ್ನು ಬಿತ್ತಬೇಕಾಗಿದೆ ಎಂದರು.
ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಜನಾಬ್ ಮುಹಮ್ಮದ್ ಕುಂಞಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಧರ್ಮಗಳನ್ನು ಗುಂಡಾಗಳು ಕೈವಶ ಮಾಡಿಕೊಂಡು ಸಮಾಜದಲ್ಲಿ ಅಶಾಂತಿಗೆ ಸೃಷ್ಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಧರ್ಮದ ನಿಜವಾದ ಸಾರವನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವಂತಹ ಧಾರ್ಮಿಕ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.
ಧರ್ಮಗಳಲ್ಲಿರುವ ನಿಜವಾದ ಸಾರವನ್ನು ತಿಳಿಯಬೇಕಾದರೆ ಮುಕ್ತವಾದ ಚರ್ಚೆ, ಸಂವಾದ ಅಗತ್ಯವಿದೆ. ಆರೋಗ್ಯಯುತ ಸಮಾಜದ ನಿಮಾರ್ಣಕ್ಕೆ ಧರ್ಮಗಳಲ್ಲಿರುವ ಉದಾತ್ತವಾದ ಚಿಂತನೆಗಳು ನಮಗೆ ದಾರಿ ದೀಪವಾಗಬಲ್ಲದು. ಈ ನಿಟ್ಟಿನಲ್ಲಿ ವಚನಗಳಲ್ಲಿರುವ ಜೀವಪರ ವಿಚಾರಗಳನ್ನು ತಿಳಿಯಲು ರಾಷ್ಟ್ರೀಯ ಭಾವೈಕ್ಯತಾ ಕಾರ್ಯಕ್ರಮ ಹೊಸ ಆಶಯವನ್ನು ಮೂಡಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ವಚನಗಳ ಉರ್ದು ಅನುವಾದಿತ ಕೃತಿಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಡಾ.ಬೆಳಗಾಮಿ ಮುಹಮ್ಮದ್ ಸಅದ್, ಅನುವಾದಕ ಪ್ರೊ.ಮಾಹಿರ್ ಮನ್ಸೂರ್ ಉಪಸ್ಥಿತರಿದ್ದರು.







