'ಪರಿಸರ ವ್ಯಾದಿ'ಯಿಂದ ಕೊಡಗು ಜಿಲ್ಲೆಗೆ ಮುಕ್ತಿ ನೀಡಿ : ಎ.ಕೆ.ಸುಬ್ಬಯ್ಯ ಕರೆ

ಮಡಿಕೇರಿ ಆ.27 : ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ ಪರಿಸರವಾದಿಗಳ ವಿರುದ್ಧ ಜನರು ಎಚ್ಚೆತ್ತುಕೊಂಡು ಹೋರಾಟ ನಡೆಸುವ ಮೂಲಕ ಪರಿಸರ ವ್ಯಾದಿಯಿಂದ ಕೊಡಗು ಜಿಲ್ಲೆಗೆ ಮುಕ್ತಿ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಎ.ಕೆ.ಸುಬ್ಬಯ್ಯ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಪಮಾನದ ಏರಿಕೆಯಿಂದಾಗಿ ಹವಾಗುಣದಲ್ಲಿ ವ್ಯತ್ಯಾಸವಾಗುತ್ತಿದೆಯೇ ಹೊರತು ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ ಮತ್ತು ವಿದ್ಯುತ್ ಮಾರ್ಗಗಳಿಂದ ಯಾವುದೇ ವ್ಯತ್ಯಾಸವಾಗುತ್ತಿಲ್ಲವೆಂದು ಅಭಿಪ್ರಾಯಪಟ್ಟರು. ಕೊಡಗು ಜಲ್ಲೆಯ ಜನರ ಜೀವನಕ್ಕೆ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವ ಪರಿಸರ ವ್ಯಾದಿಗಳು ಮತ್ತೆ ಬಾಲ ಬಿಚ್ಚಿದ್ದಾರೆ ಎಂದು ಅವರು ಆರೋಪಿಸಿದರು.
ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ವಿರೋಧಿಸಿ ಕುಟ್ಟದಲ್ಲಿ ಪ್ರತಿಭಟನೆ ನಡೆಸಿದ ಪರಿಸರವಾದಿಗಳ ವಿರುದ್ಧ ಪ್ರತಿರೋಧ ವ್ಯಕ್ತವಾಗಿರುವುದು ಸ್ವಾಗತಾರ್ಹ. ಇದೇ ರೀತಿ ಇನ್ನು ಮುಂದೆಯೂ ಜಿಲ್ಲೆಯ ಎಲ್ಲಾ ಜನರು ಜಾಗೃತರಾಗಿ ಪರಿಸರವಾದಿಗಳ ವಿರುದ್ಧ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಪರಿಸರವಾದಿಗಳ ಪ್ರತಿಭಟನೆಗೆ ಪ್ರತಿರೋಧ ವ್ಯಕ್ತಪಡಿಸಿದ ಕೊಡವ ಸಮಾಜದ ಅಧ್ಯಕ್ಷರುಗಳು ಅಭಿನಂದನಾರ್ಹರು ಎಂದು ತಿಳಿಸಿದ ಅವರು, ಪರಿಸರವಾದಿಗಳ ಪರವಾಗಿ ಕಾರ್ಯ ನಿರ್ವಹಿಸಿದ ಇತರ ಕೊಡವ ಸಮಾಜಗಳು ಇನ್ನಾದರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಒಂದೊಂದು ಮನೆಯಲ್ಲಿ ನಾಲ್ಕೈದು ಕಾರುಗಳಿವೆ. ಜಿಲ್ಲೆಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ರಸ್ತೆಯೆ ಇಲ್ಲದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೆದ್ದಾರಿ ಬೇಡ ಎನ್ನುವವರು ಸೈಕಲ್‍ನಲ್ಲಿ ಸಂಚರಿಸಿ ಪರಿಸರ ಪ್ರೇಮವನ್ನು ತೋರಿಸಲಿ ಎಂದು ಸವಾಲು ಹಾಕಿದರು.
ರೈಲು ಮಾರ್ಗ ಪರಿಸರ ಸ್ನೇಹಿಯಾಗಿದ್ದು, ಅತ್ಯಂತ ಅನುಕೂಲಕರ ಮತ್ತು ಕಡಿಮೆ ವೆಚ್ಚದ ಪ್ರಯಾಣ ವ್ಯವಸ್ಥೆಯಾಗಿದೆ. ಈ ಎರಡು ಮಾರ್ಗಗಳಿಂದ ಮರಗಳ ಹನನವಾಗುತ್ತದೆ ಎನ್ನುವುದು ಪರಿಸರವಾದಿಗಳ ಸುಳ್ಳು ಹೇಳಿಕೆಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮರಗಳನ್ನು ಕಡಿದಂತೆ ಮತ್ತೆ ಮರಗಳನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಮನುಷ್ಯನ ಪ್ರತಿಯೊಂದು ಚಟುವಟಿಕೆಯು ಪರಿಸರಕ್ಕೆ ಹಾನಿಕಾರಕವಾಗಿಯೇ ಇದೆ. ಪರಿಸರ ನಾಶವಾಗಬಾರದೆಂದರೆ ಮನುಷ್ಯ ಕುಲ ನಾಶವಾಗಬೆÉೀಕೆಂದು ಅಭಿಪ್ರಾಯಪಟ್ಟ ಎ.ಕೆ.ಸುಬ್ಬಯ್ಯ, ಅಭಿವೃದ್ಧಿಯೊಂದಿಗೆ ಪರಿಸರದ ವೃದ್ಧಿಯೂ ಆಗಬೇಕೆಂದರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿದೇಶಿ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿರುವ ಪರಿಸರವಾದಿಗಳು, ಕೃಷಿಕರಿಗೆ ಉಸಿರು ಗಟ್ಟಿಸುವ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವವೂ ಇದೆಯೆಂದು ಅವರು ಆರೋಪಿಸಿದರು. ಖಾಸಗಿ ಜಮೀನಿನಲ್ಲಿ ಎಲ್ಲೂ ಪರಿಸರ ನಾಶವಾಗಿಲ್ಲ. ಅರಣ್ಯ ಪ್ರದೇಶದಲ್ಲಷ್ಟೆ ಮರಗಳು ನಾಶವಾಗಿ ಟೀಕ್, ನೀಲಗಿರಿ ಹಾಗೂ ರಬ್ಬರ್ ಎಸ್ಟೇಟ್‍ಗಳು ಸ್ಥಾಪನೆಗೊಂಡಿವೆ. ಅರಣ್ಯಕ್ಕೆ ಬೆಂಕಿ ಬಿದ್ದು, ಮರಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಈ ಬೆಳವಣಿಗೆ ಬಗ್ಗೆ ಪರಿಸರ ವಾದಿಗಳು ಯಾವುದೇ ಧ್ವನಿ ಎತ್ತುತ್ತಿಲ್ಲವೆಂದು ಸುಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಹಾಗೂ ಪರಿಸರ ವಾದಿಗಳು ಷಡ್ಯಂತ್ರ ರೂಪಿಸಿ ಕಾಡಾನೆಗಳಿಗೆ ಆಹಾರ ಮತ್ತು ನೀರಿನ ಕೊರತೆಯನ್ನು ಉಂಟು ಮಾಡಿ ಕಾಡಾನೆಗಳು ಕಾಫಿ ತೋಟವನ್ನು ಪ್ರವೇಶಿಸುವಂತೆ ಮಾಡುತ್ತಿದ್ದಾರೆ. ಆ ಮೂಲಕ ಬೆಳೆಗಾರರನ್ನು ಎತ್ತಂಗಡಿ ಮಾಡುವ ಹುನ್ನಾರ ಇದರಲ್ಲಿ ಅಡಗಿದೆÀ ಎಂದು ಗಂಭೀರ ಆರೋಪ ಮಾಡಿದರು.
ಯಥೇಚ್ಛವಾಗಿ ಬಿದಿರು ಬೆಳೆಯುವ ಕೊಡಗಿನ ಅರಣ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬಿದಿರಿನ ಕೊರತೆ ಎದುರಾಗಿದೆ. ಬಿದಿರು ಚಿಗುರೊಡೆಯದಂತೆ ಬಿದಿರಿನ ಬೀಜಗಳಿಗೆ ರಾಸಾಯನಿಕಗಳನ್ನು ಬೆರೆಸಲಾಗುತ್ತಿದೆ ಎಂದು ಎ.ಕೆ. ಸುಬ್ಬಯ್ಯ ಆರೋಪಿಸಿದರು.
ಭ್ರಷ್ಟ ಅರಣ್ಯ ಅಧಿಕಾರಿಗಳಿಂದ ಹಾಗೂ ಡೋಂಗಿ ಪರಿಸರವಾದಿಗಳಿಂದ ಪರಿಸರ ನಾಶವಾಗಿದೆಯೇ ಹೊರತು ಬೆಳೆಗಾರರಿಂದ ಅಥವಾ ರೈತರಿಂದ ಅಲ್ಲ. ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಾಗ ಅಥವಾ ಇನ್ಯಾವುದೇ ವಿಧದಿಂದ ಅರಣ್ಯ ನಾಶವಾದಾಗ ಅದರ ತನಿಖಾ ವರದಿಯನ್ನು ಬಹಿರಂಗ ಪಡಿಸದೆ ಮುಚ್ಚಿ ಹಾಕಲಾಗುತ್ತಿದೆ. ಇದೊಂದು ಅಂತಾರಾಷ್ಟ್ರೀಯ ಪಿತೂರಿಯಾಗಿದ್ದು, ಪರಿಸರವಾದಿಗಳು ರಾಷ್ಟ್ರ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಸುಬ್ಬಯ್ಯ ಆರೋಪಿಸಿದರು.
ಸುಳ್ಳನ್ನೆ ಹೇಳಿ ಜನರನ್ನು ಮೂರ್ಖರನ್ನಾಗಿಸುವ ಪರಿಸರವಾದಿಗಳ ವಿರುದ್ಧ ಜನರು ಎಚ್ಚೆತ್ತುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಜನರ ಬದುಕು ಮುಖ್ಯವಾಗಿದ್ದು. ರಾಜಕೀಯ ಆಮೇಲೆ ಎಂದು ಅಭಿಪ್ರಾಯಪಟ್ಟ ಎ.ಕೆ. ಸುಬ್ಬಯ್ಯ, ಬಹುತೇಕ ಕೊಡವರು ಪರಿಸರವಾದಿಗಳ ವಿರುದ್ಧ ಇದ್ದಾರೆ ಎಂದರು. ಪರಿಸರ ವಾದಿಗಳು ಕೊಡವರನ್ನೆ ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಕೇರಳದ ವಿರುದ್ಧ ದ್ವೇಷ ಸಾಧನೆಯ ಪ್ರಚೋದನೆಯನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಶೇ.70 ರಷ್ಟು ವ್ಯಾವಹಾರಿಕ ನಂಟನ್ನು ಕೊಡಗಿನ ಜನ ಕೇರಳದೊಂದಿಗೆ ಹೊಂದಿದ್ದಾರೆ ಎಂದು ಸುಬ್ಬಯ್ಯ ಹೇಳಿದರು. ಯುಕೋ ಸಂಘಟನೆ ಪರಿಸರವಾದಿಗಳ ಅಂಗ ಸಂಸ್ಥೆ ಎಂದು ಟೀಕಿಸಿದ ಎ.ಕೆ. ಸುಬ್ಬಯ್ಯ, ರೈತರಲ್ಲದವರು ರೈತ ಸಂಘವನ್ನು, ಕಾರ್ಮಿಕರಲ್ಲದವರು ಕಾರ್ಮಿಕ ಸಂಘÀಟನೆಯನ್ನು ಕಟ್ಟಿಕೊಂಡು ಪರಿಸರವಾದಿಗಳಿಗೆ ಬೆಂಬಲ ನೀಡುತ್ತಿರುವಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಎ.ಕೆ.ಸುಬ್ಬಯ್ಯ, ಜನಪರವಾದ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.







