ಲಿಂಗಾಯತ ತತ್ವಗಳ ಬಗ್ಗೆ ಅಧ್ಯಯನ ಮಾಡಲಿ: ನಿಜಗುಣಾನಂದ ಸ್ವಾಮೀಜಿ
ಬೆಳಗಾವಿ, ಆ. 27: ಲಿಂಗಾಯತ ಧರ್ಮದ ತತ್ವಗಳ ಕುರಿತು ಸಂಸದ ಸುರೇಶ ಅಂಗಡಿ ಅವರು ಸರಿಯಾಗಿ ಅಧ್ಯಯನ ಮಾಡಲಿ ಎಂದು ಬೈಲೂರು ನಿಶ್ಕಲ್ ಮಠದ ನಿಜಗುಣಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ರವಿವಾರ ನಗರದ ಕೆಪಿಟಿಸಿಎಲ್ ಭವನದಲ್ಲಿ ಬೆಳಗಾವಿ ತಾಲೂಕು ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ನೂತನವಾಗಿ ಎಐಸಿಸಿ ಕಾರ್ಯದರ್ಶಿ ಮತ್ತು ತೆಲಂಗಾಣ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡ ಸತೀಶ ಜಾರಕಿಹೊಳಿ ಅವರಿಗೆ ಸನ್ಮಾನ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ನಡೆದದ್ದು ಲಿಂಗಾಯತ ರ್ಯಾಲಿ ಅಲ್ಲ, ಅದು ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ನಡೆದ ಸಮಾವೇಶ ಮತ್ತು ನಾಗನೂರು ಶ್ರೀಗಳು ಹಿಂದೂ ಅಲ್ಲ ಅನ್ನೋದಾದರೆ ಮಸೀದಿ ಕಟ್ಟಿಕೊಳ್ಳಲಿ ಎಂದು ಸಂಸದ ಸುರೇಶ ಅಂಗಡಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ನಿಜಗುಣಾನಂದ ಸ್ವಾಮೀಜಿ, ಸಂಸದ ಸುರೇಶ ಅಂಗಡಿ ಅವರು ಒಳ್ಳೆಯವರು, ಆದರೆ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ಅಧ್ಯಯನದ ಕೊರತೆ ಇದೆ. ಅವರು ಬಸವಣ್ಣನವರ ತತ್ವಗಳನ್ನು ಅಭ್ಯಸಿಸಿದರೆ, ಅವರು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.
ವೈದಿಕ ಪರಂಪರೆಯ ಹಿಂದೂ ಧರ್ಮಕ್ಕೂ, ಲಿಂಗಾಯತರಿಗೂ ಯಾವುದೇ ಸಂಬಂಧವಿಲ್ಲ, ಹಿಂದೂ ಧರ್ಮವೇ ಬೇರೆ, ಲಿಂಗಾಯತ ಧರ್ಮವೇ ಬೇರೆ. ಜೈನ, ಸಿಖ್ ಧರ್ಮಗಳಂತೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಅಸ್ತಿತ್ವ ಇದೆ. ಹೀಗಾಗಿ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಸ್ಥಾನಮಾನ ಅಗತ್ಯ ಎಂದು ಅವರು ಪ್ರತಿಪಾದಿಸಿದರು.







