ಅಂತರ್‌ಜಿಲ್ಲಾ ಕಳವು ಆರೋಪಿಯ ಸೆರೆ: ಚಿನ್ನಾಭರಣ ವಶ

ಉಡುಪಿ, ಆ.27: ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ನನ್ನು ಉಡುಪಿ ಪೊಲೀಸರು ಆ.26ರಂದು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಇನ್ನ ಗ್ರಾಮದ ದಾಸಬೈಲು ನಿವಾಸಿ ಪ್ರದೀಪ್ ಆರ್. ಮೊಯಿಲಿ(30) ಬಂಧಿತ ಆರೋಪಿ. ಈತನಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 61,000ರೂ. ಮೌಲ್ಯದ ಒಟ್ಟು 19.290 ಗ್ರಾಂ ತೂಕದ ಚಿನ್ನಾ ಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದ್ದು, ಈತ ಈ ಹಿಂದೆ ಉಡುಪಿ ಜಿಲ್ಲೆಯ ಕಾಪು, ಶಿರ್ವ, ಪಡುಬಿದ್ರೆ ಠಾಣೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಸುರತ್ಕಲ್, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳ ಆರೋಪಿಯಾಗಿದ್ದಾನೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ್ ಪಾಟೀಲ್ ನಿರ್ದೇಶನದಲ್ಲಿ ಉಡುಪಿ ಡಿವೈಎಸ್ಪಿಎಸ್.ಕೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಸೂಚನೆಯಂತೆ ಉಡುಪಿ ನಗರ ಪೊಲಿಸ್ ಠಾಣಾ ಎಸ್ಸೈ ಅನಂತ ಪದ್ಮನಾಭ ಕೆ.ವಿ. ಮತ್ತು ಸಿಬ್ಬಂದಿಯವರಾದ ಗೋಪಾಲಕೃಷ್ಣ ಜೋಗಿ, ವಿಜಯ ಸಿ., ಜೀವನ್, ಪ್ರಸನ್ನ, ಗಣೇಶ, ಸಂತೋಷ್ ರಾಥೋಡ್, ಪ್ರಸಾದ್ ಈ ಕಾರ್ಯಾಚರಣೆ ನಡೆಸಿದ್ದರು.





