ಅಂಬೇಡ್ಕರ್ ಸ್ಕೂಲ್ ಆರಂಭಕ್ಕೆ ಮಾಜಿ ಪ್ರಧಾನಿ ಗೈರು

ಬೆಂಗಳೂರು, ಆ.27: ನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಇಂದಿನಿಂದ ಆರಂಭಗೊಳ್ಳಲಿದ್ದು, ಮೊದಲ ತರಗತಿಯಲ್ಲಿ ಉಪನ್ಯಾಸ ನೀಡಬೇಕಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೈರು ಹಾಜರಾಗಲಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಔಪಚಾರಿಕವಾಗಿ ಬೆಂಗಳೂರಿಗೆ ಭೇಟಿ ನೀಡಲು ಸಮಯಾವಕಾಶ ನಿಗದಿಪಡಿಸಿಲ್ಲ. ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನಿರಂತರ ಪ್ರಯತ್ನದ ನಂತರವೂ ಸಮಯ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಮನಮೋಹನ್ ಸಿಂಗ್‌ರವರ ಅನುಪಸ್ಥಿತಿಯಲ್ಲಿಯೇ ಅನಿವಾರ್ಯವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅಧಿಕೃತವಾಗಿ ಬೆಳಗ್ಗೆ 11ಕ್ಕೆ ಮೊದಲ ತರಗತಿಗಳಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ಉಪನ್ಯಾಸ ನೀಡಲಿದ್ದಾರೆ.
ಬಳಿಕ ಆ.30 ರಂದು ಅರ್ಥಶಾಸ್ತ್ರಜ್ಞ ಅರ್ಣಬ್ ಮುಖರ್ಜಿ ಉಪನ್ಯಾಸ ನೀಡಲಿದ್ದಾರೆ. ಸೆಪ್ಟೆಂಬರ್ ಎರಡನೆ ವಾರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡಲಿದ್ದು, ಅತಿಥಿ ಉಪನ್ಯಾಸ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.





