ಜಿಲ್ಲಾ ಜಾನಪದ ಪರಿಷತ್ ನ ಮೂರ್ನಾಡು ಪದಾಧಿಕಾರಿಗಳ ಪದಗ್ರಹಣ

ಮಡಿಕೇರಿ,ಆ.27 :ಕೊಡಗು ಜಿಲ್ಲಾ ಜಾನಪದ ಪರಿಷತ್ ನ ವತಿಯಿಂದ ಆರಂಭಿಸಲಾದ ಮೂರ್ನಾಡು ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಎಸ್.ಡಿ. ಪ್ರಶಾಂತ್ ಮತ್ತು ಕಾರ್ಯಾಧ್ಯಕ್ಷರಾಗಿ ಕಿಗ್ಗಾಲ್ ಗಿರೀಶ್ ಅಧಿಕಾರ ಸ್ವೀಕರಿಸಿದರು.
ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಜರುಗಿದ ಸಮಾರಂಭದಲ್ಲಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ನೂತನ ಆಡಳಿತ ಮಂಡಳಿಗೆ ಅಧಿಕಾರ ನೀಡಿ ಮಾತನಾಡಿದರು.
ಜನಪದ ಮೌಲ್ಯಗಳಿಗೆ ಯಾವುದೇ ರೀತಿಯಲ್ಲಿಯೂ ಬೆಲೆ ಕಟ್ಟಲಾಗದು. ಇಂಥ ಜನಪದ ಮೌಲ್ಯಗಳನ್ನು ಇಂದಿನ ಆಧುನೀಕ ದಿನಗಳಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಕಾಣುತ್ತೇವೆ. ಹೀಗಾಗಿ ಹಳ್ಳಿಗಳಲ್ಲಿ ಇಂದಿಗೂ ಜಾನಪದೀಯ ಶ್ರೀಮಂತಿಕೆಯಿದೆ ಎಂದರು. ನಾಶದಂಚಿನಲ್ಲಿರುವ ಅನೇಕ ಜನಪದ ಕಲೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದೊಂದಿಗೆ ಜಾನಪದ ಪರಿಶತ್ ಕೊಡಗಿನಲ್ಲಿಯೂ ಕಳೆದ ಒಂದೂಕಾಲು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅನಂತಶಯನ ಹೇಳಿದರು. ಹಳೇ ಬೇರು ಇಲ್ಲದೆ ಹೊಸಚಿಗುರಿಲ್ಲ. ಹೀಗಾಗಿ ತಾಯಿ ಬೇರಿನಂತಿರುವ ಜಾನಪದದ ರಕ್ಷಣೆ ಯುವಪೀಳಿಗೆಯ ಕರ್ತವ್ಯವಾಗಬೇಕೆಂದೂ ಅನಂತಶಯನ ಅಭಿಪ್ರಾಯಪಟ್ಟರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಈಗಾಗಲೇ ನಾಲ್ಕು ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಜಾನಪದ ಪರಿಷತ್ ಮುಡಿಗೆ ಇದೀಗ ಮೂರ್ನಾಡು ಹೋಬಳಿ ಘಟಕದ ಮೂಲಕ ಹೊಸದ್ದೊಂದು ಗರಿ ಸೇರ್ಪಡೆಯಾಗಿದೆ ಎಂದು ಹಷ9 ವ್ಯಕ್ತಪಡಿಸಿದರಲ್ಲದೇ, ಎಲ್ಲವೂ ಮೊಬೈಲ್ ನಲ್ಲಿಯೇ ದೊರಕುತ್ತಿರುವ ಈ ನವತಂತ್ರಜ್ಞಾನದ ದಿನಗಳಲ್ಲಿ ಮೊಬೈಲ್ ಮೂಲಕವೂ ಜಾನಪದ ಕಲೆ, ಸಾಹಿತ್ಯದ ಪಸರಿಸುವಿಕೆ ಸಾಧ್ಯವಾಗಬೇಕು ಎಂದು ಆಶಿಸಿದರು. ಸೆ.7 ರಂದು ಜಾನಪದ ಪರಿಷತ್ ಆಶ್ರಯದಲ್ಲಿ ಮಡಿಕೇರಿಯಲ್ಲಿ ಶಿಕ್ಷಕರಿಗಾಗಿ ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಅವರಿಂದ ಕನ್ನಡ ಭಾಷೆ ಮತ್ತು ಜಾನಪದ ಕುರಿತಾಗಿ ವಿಚಾರಗೋಷ್ಟಿ ಆಯೋಜಿಸಲಾಗಿದೆ ಎಂದೂ ಅನಿಲ್ ಮಾಹಿತಿ ನೀಡಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ.ಮಾದಪ್ಪ ಮಾತನಾಡಿ, ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಜಾನಪದ ಕಲೆ, ಸಾಹಿತ್ಯಕ್ಕೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಅಗತ್ಯ ಸಹಕಾರವನ್ನು ಸಂಸ್ಥೆಯ ಕಲಾ ಕೇಂದ್ರದಿಂದ ನೀಡಲಾಗುತ್ತದೆ. ಕೊಡಗಿನಲ್ಲಿ ದೇಶದ ಅಪೂರ್ವ ಸಂಸ್ಕೃತಿ ಇದ್ದು ಇದನ್ನು ಭವಿಷ್ಯದ ಪೀಳಿಗೆಗೂ ರಕ್ಷಿಸುವ ನಿಟ್ಟಿನಲ್ಲಿ ಜಾನಪದ ಸಂಬಂಧಿತ ಸಾಕಷ್ಟು ಕಾರ್ಯಕ್ರಮಗಳು ನಿರಂತರವಾಗಬೇಕು ಎಂದು ಆಶಿಸಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ ಮಾತನಾಡಿ, ಜಾನಪದ ವಸ್ತುಗಳು ಮೂರ್ನಾಡು ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಇಂಥ ವಸ್ತುಗಳನ್ನು ಮೂರ್ನಾಡು ವಿದ್ಯಾಸಂಸ್ಥೆಯಿಂದ ಸಂಗ್ರಹಿಸಿ ವಸ್ತು ಸಂಗ್ರಹಾಲಯ ರೂಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಿಸಿದರು.
ಜಾನಪದ ಪರಿಷತ್ ನ ಮೂರ್ನಾಡು ಹೋಬಳಿ ಘಟಕದ ನೂತನ ಅಧ್ಯಕ್ಷ ಎಸ್.ಡಿ. ಪ್ರಶಾಂತ್ ಮಾತನಾಡಿ, ಜಾಗತೀಕರಣದ ಅಬ್ಬರದಲ್ಲಿ ಕೊಡಗಿನ ಸಂಸ್ಕøತಿ ಸೇರಿದಂತೆ ಜಗತ್ತಿನ ಅಮೂಲ್ಯ ಸಂಸ್ಕೃತಿ ಜಾನಪದಗಳು ನಾಶವಾಗುತ್ತಿದೆ. ಇಂಥ ಕಲೆಗಳ ರಕ್ಷಣೆಗೆ ಜಾನಪದ ಪರಿಷತ್ ಕಾರ್ಯನಿರ್ವಹಿಸಲಿದೆ. ಮೂರ್ನಾಡು ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಜಾನಪದ ಪರಿಷತ್ ನ ಕಾರ್ಯಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಘೋಷಿಸುವ ಮುನ್ನವೇ ಹಲವಾರು ವರ್ಷಗಳಿಂದಲೇ ಸ್ವಚ್ಛ ಕೊಡಗು ಅಭಿಯಾನವನ್ನು ವಿದ್ಯಾಸಂಸ್ಥೆಯಲ್ಲಿರುವ ಕ್ಲೀನಿಂಗ್ ಬ್ರಿಗೇಡ್ ಮೂಲಕ ಯಶಸ್ವಿಯಾಗಿ ಆಯೋಜಿಸುತ್ತಿರುವುದನ್ನು ಪ್ರಶಂಶಿಸಿದರು.
ಜಾನಪದ ಪರಿಷತ್ ನ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಅಂಬೆಕಲ್ ಕುಶಾಲಪ್ಪ, ಮೊಣ್ಣಂಡ ಶೋಭಾ ಸುಬ್ಬಯ್ಯ, ಉಜ್ವಲ್ ರಂಜಿತ್, ಐಮುಡಿಯಂಡ ರಾಣಿ ಮಾಚಯ್ಯ, ಮೂರ್ನಾಡು ಘಟಕದ ಕಾರ್ಯಾಧ್ಯಕ್ಷ ಕಿಗ್ಗಾಲ್ ಗಿರೀಶ್, ದಾನಿಗಳಾದ ಬಾಚೆಟ್ಟೀರ ಲಾಲು ಮುದ್ದಯ್ಯ ಉಪಸ್ಥಿತರಿದ್ದರು.
ಘಟಕದ ಕಾರ್ಯದರ್ಶಿ ಬಿ.ಎಂ.ಕಲ್ಪನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಕಿಗ್ಗಾಲು ಹರೀಶ್ ಸ್ವಾಗತಿಸಿ, ಮಮತ ಪ್ರಾರ್ಥಿಸಿ, ಎಚ್.ಬಿ.ಕೃಷ್ಣಪ್ಪ ವಂದಿಸಿದರು. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ಕಲಾವಿದೆ ಮೊಣ್ಣಂಡ ಶೋಭಾಸುಬ್ಬಯ್ಯ, ಮುನೀರ್ ಅಹಮ್ಮದ್ ಅವರಿಂದ ಜಾನಪದ ಹಾಡುಗಳ ಕಾರ್ಯಕ್ರಮ ಮನಸೆಳೆಯಿತು. ಮೂರ್ನಾಡು ಜಾನಪದ ಪರಿಷತ್ ಹೋಬಳಿ ಘಟಕದ ಪದಾಧಿಕಾರಿಗಳು
ಉಪಾಧ್ಯಕ್ಷರಾಗಿ ಹರ್ಷ ಮಂದಣ್ಣ, ಕೃಷ್ಣಪ್ಪ ಎಚ್.ಬಿ., ಎ.ಡಿ.ರೋಹಿಣಿ, ಪ್ರಧಾನ ಕಾರ್ಯದರ್ಶಿಯಾಗಿ ಕಿಗ್ಗಾಲ್ ಹರೀಶ್, ಕಾರ್ಯದರ್ಶಿಯಾಗಿ ಬಿ.ಎಂ.ಕಲ್ಪನಾ, ಸಹಕಾರ್ಯದರ್ಶಿಯಾಗಿ ತೇಜಸ್ವಿನಿ, ಖಚಾಂಚಿಯಾಗಿ ಎನ್.ಸಿ.ನವೀನ್, ಸಂಚಾಲಕರಾಗಿ ಎ.ಜಿ.ಗಣೇಶ್, ಕೆ.ಕೆ.ಬೋಪಣ್ಣ, ಗೌರವ ನಿರ್ದೇಶಕರಾಗಿ ರವಿಶಂಕರ್, ನಂಜೇಗೌಡ ಸೇರಿದಂತೆ 26 ನಿರ್ದೇಶಕರನ್ನು ನೇಮಕಮಾಡಲಾಗಿದೆ.
ಜಿಲ್ಲಾ ಜಾನಪದ ಪರಿಷತ್ ನ ಮೂನಾ9ಡು ಹೋಬಳಿ ಘಟಕದ ಉದ್ಘಾಟನೆ ಸಂದರ್ಭ ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ವೈವಿಧ್ಯಮಯ ಜಾನಪದ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಮೂರ್ನಾಡು ವ್ಯಾಪ್ತಿಯ ಹಲವು ಮನೆಗಳಲ್ಲಿ ತಲತಲಾಂತರಗಳಿಂದ ಬಳಕೆಯಾಗುತ್ತಿದ್ದ ಪ್ರಾಚೀನ ಕಾಲದ ಪರಿಕರಗಳು, 160 ವರ್ಷದ ಹಿಂದಿನ ಕೋವಿ, ದುಡಿಕೊಟ್ಟ್ ಸೇರಿದಂತೆ ಹಲವಾರು ವೈವಿಧ್ಯಮಯ ಪರಿಕರ, ಜಾನಪದ ವಸ್ತುಗಳನ್ನು ವಿದ್ಯಾರ್ಥಿಗಳು ಮತ್ತು ಜಾನಪದ ಪರಿಷತ್ ಸದಸ್ಯರು ಸಂಗ್ರಹಿಸಿ ಈ ಪ್ರದರ್ಶನದಲ್ಲಿಟ್ಟಿದ್ದರು. ಜಾನಪದ ಪರಿಷತ್ ನ ಉದ್ಘಾಟನೆಗೆ ಈ ಪ್ರದರ್ಶನ ಮೆರುಗು ನೀಡಿತು.







