ಮಂಡ್ಯ: ನಾಲೆಗೆ ಬಿದ್ದು ಮಗು ಸಾವು
ಮಂಡ್ಯ, ಆ.27: ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಲಿವಾನ ಗ್ರಾಮದಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಜನತಾ ಕಾಲನಿಯ ತಿಮ್ಮಯ್ಯ ಮತ್ತು ಸುಧಾ ದಂಪತಿಯ ಪುತ್ರಿ ದೀಕ್ಷಾ ಮೃತಪಟ್ಟ ಮಗು ಎಂದು ತಿಳಿದು ಬಂದಿದೆ.
ಮನೆ ಎದುರು ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನಾಲೆ ಬಳಿಗೆ ತೆರಳಿ ಉರುಳಿಬಿದ್ದಿದೆ. ನಾಲೆಯಲ್ಲಿ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಪಕ್ಕದಲ್ಲೇ ನಾಲೆ ಇರುವುದರಿಂದ ತಡೆಗೋಡೆ ನಿರ್ಮಿಸಲು ಹಲವಾರು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮವಹಿಸಿಲ್ಲ. ಈಗಾಗಲೇ ಎರಡು ಮಕ್ಕಳು ಪ್ರಾಣ ಕಳೆದುಕೊಂಡಿವೆ ಎಂದು ಗ್ರಾಮಸ್ಥರು ಕಿಡಿಕಾರಿದರು.
ಈ ಸಂಬಂಧ ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





