ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಜರ್ದಾರಿ ದೋಷಮುಕ್ತಿ

ಇಸ್ಲಾಮಾಬಾದ್, ಆ.27: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರನ್ನು ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಜರ್ದಾರಿ ವಿರುದ್ಧ ಪ್ರಾಸಿಕ್ಯೂಶನ್ ಸಲ್ಲಿಸಿರುವ ಬಹುತೇಕ ದಾಖಲೆಗಳು ಫೋಟೋಕಾಪಿಗಳಾಗಿರುವುದರಿಂದ ಅವುಗಳನ್ನು ನ್ಯಾಯಾಲಯವು ಸ್ವೀಕರಿಸಕೂಡದು ಎಂದು ಜರ್ದಾರಿ ಪರ ವಕೀಲ ಫಾರೂಕ್ ಎಚ್. ನಾಯೆಕ್ ವಾದಿಸಿದ್ದರು. ಇದೊಂದು ಹಳೆಯ ಪ್ರಕರಣವಾಗಿರುವುದರಿಂದ ಸಾಕ್ಷಿ ನೀಡಿದ ಬಹುತೇಕ ಮಂದಿಗೆ ಹೆಚ್ಚಿನ ವಿವರಗಳು ನೆನಪಿಲ್ಲವೆಂದು ಅವರು ಹೇಳಿದ್ದಾರೆ.
ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಜರ್ದಾರಿಯವರನ್ನು ದೋಷಮುಕ್ತಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಜರ್ದಾರಿ ಕುರಿತ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು 1999ರಲ್ಲಿ ಆರಂಭಿಸಲಾಗಿತ್ತು. ಆದರೆ 2007ರಲ್ಲಿ ಝರ್ದಾರಿ ಪತ್ನಿ, ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹಾಗೂ ಮಾಜಿ ಸೇನಾಧ್ಯಕ್ಷ ಜ.ಪರ್ವೇಝ್ ಮುಶರ್ರಫ್ ನಡುವೆ ಏರ್ಪಟ್ಟ ಒಡಂಬಡಿಕೆಯ ಬಳಿಕ ಅದನ್ನು ಕೈಬಿಡಲಾಗಿತ್ತು.
ಆದಾಗ್ಯೂ, ಸುಪ್ರೀಂಕೋರ್ಟ್ ಈ ಒಡಂಬಡಿಕೆಯನ್ನು ತಿರಸ್ಕರಿಸಿತ್ತು ಹಾಗೂ 2009ರಲ್ಲಿ ತನಿಖೆಗೆ ಆದೇಶಿಸಿತು. ಆದಾಗ್ಯೂ ಆಗ ಝರ್ದಾರಿ ಅಧ್ಯಕ್ಷರಾಗಿದ್ದುದರಿಂದ ಅವರನ್ನು ವಿಚಾರಣೆಗೊಳಪಡಿಸಲು ಸಾಧ್ಯವಾಗಿರಲಿಲ್ಲ. 2015ರಲ್ಲಿ ನವಾಝ್ ಶರೀಫ್ ಆಡಳಿತದಲ್ಲಿ ಪ್ರಕರಣದ ವಿಚಾರಣೆಯನ್ನು ಮತ್ತೆ ಆರಂಭಿಸಲಾಗಿತ್ತು.







