ಸಿರಿಯ-ಲೆಬನಾನ್ ಗಡಿಯಲ್ಲಿ ಕದನವಿರಾಮ

ಬೈರೂತ್,ಆ.27: ಐಸಿಸ್ ವಿರುದ್ಧ ಒಂದು ಕಡೆಯಿಂದ ಲೆಬನಾನ್ ಸೇನೆ ಹಾಗೂ ಇನ್ನೊಂದೆಡೆಯಿಂದ ಹಿಜ್‌ಬೊಲ್ಲಾ ಮತ್ತು ಸಿರಿಯನ್ ಸೇನೆಯ ಭೀಕರ ಕಾಳಗದಲ್ಲಿ ತೊಡಗಿರುವ ಸಿರಿಯ-ಲೆಬನಾನ್ ಗಡಿಯಲ್ಲಿ ರವಿವಾರ ಕದನವಿರಾಮ ಜಾರಿಗೊಂಡಿದೆ.
ಲೆಬನಾನ್ ಸೇನೆಯು ತಾನು ಕದನವಿರಾಮವನ್ನು ಘೋಷಿಸಿರುವುದಾಗಿ ರವಿವಾರ ಬೆಳಗ್ಗೆ 7:00 ಗಂಟೆಯ ವೇಳೆಗೆ ತಿಳಿಸಿದೆ. ಇದೇ ವೇಲೆ ಹಿಜ್‌ಬೊಲ್ಲಾ ಮತ್ತು ಸಿರಿಯ ಸೇನೆ ಕೂಡಾ ಪ್ರತ್ಯೇಕ ಹೇಳಿಕೆಯೊಂದನ್ನು ನೀಡಿ, ಸಿರಿಯದ ಪಶ್ಚಿಮ ಖ್ವಾಲಾಮೂನ್ ಪ್ರಾಂತದಲ್ಲಿ ಐಸಿಸ್ ವಿರುದ್ಧ ತಮ್ಮ ದಾಳಿಯನ್ನು ಸ್ಥಗಿತಗೊಳಿಸಿ ಕದನವಿರಾಮ ಘೋಷಿಸಿರುವುದಾಗಿ ತಿಳಿಸಿದೆ.
ಒಂದು ವಾರದ ಹಿಂದೆ ಲೆಬನಾನ್ ಸೇನೆ, ಹಿಜ್‌ಬೊಲ್ಲಾ ಬಂಡುಕೋರರು ಐಸಿಸ್ ಭಯೋತ್ಪಾದಕರ ವಿರುದ್ಧ ಪ್ರತ್ಯೇಕವಾಗಿ ದಾಳಿಯನ್ನು ಆರಂಭಿಸಿದ್ದರು.
ಸಿರಿಯ-ಲೆಬನಾನ್‌ನ ಗಡಿಮುಂಚೂಣಿಯಲ್ಲಿರುವ ಖ್ವಾಲಾಮೂನ್ ಪ್ರದೇಶದಲ್ಲಿರುವ ಬಂಜರು ಪರ್ವತಪ್ರದೇಶಗಳ ಐಸಿಸ್ ಉಗ್ರರ ಕಟ್ಟಕಡೆಯ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟಿದೆ.
ಐಸಿಸ್ ಉಗ್ರರ ಒತ್ತೆಸೆರೆಯಲ್ಲಿರುವ 9 ಮಂದಿ ಸೈನಿಕರನ್ನು ಬಂಧಮುಕ್ತಗೊಳಿಸುವ ಉದ್ದೇಶದಿಂದ ಮಾತುಕತೆ ನಡೆಸುವುದಕ್ಕೆ ಸುಗಮಹಾದಿ ಕಲ್ಪಿಸಲು ಕದನವಿರಾಮ ಘೋಷಿಸಲಾಗಿದೆಯೆದಂು ಲೆಬನಾನ್ ಸೇನೆ ತಿಳಿಸಿದೆ.
ಲೆಬನಾನ್ ಸೇನೆಯ ದಾಳಿಯಿಂದಾಗಿ ಐಸಿಸ್ ಒತ್ತಡಕ್ಕೆ ಸಿಲುಕಿದ್ದು, ಮಾತುಕತೆಯ ಕೊಡುಗೆ ನೀಡಿತ್ತು. ಆದರೆ ಅದರ ಹಿಂದೆ ಯಾವುದೇ ದುರುದ್ದೇಶವಿದ್ದಲ್ಲಿ ಸೇನೆಯು ಈಶಾನ್ಯದಲ್ಲಿರುವ ರಾಸ್ ಬಾಲ್‌ಬೆಕ್ ನಗರದಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಲಿದೆಯೆಂದು ಲೆಬನಾನ್‌ನ ಭದ್ರತಾ ಮೂಲಗಳು ತಿಳಿಸಿವೆ.







