ಯುಎಇ: ವ್ಯಾಟ್ ಜಾರಿಗೆ ಅಧ್ಯಾದೇಶ

ಅಬುದಾಭಿ,ಆ.27: ಮುಂದಿನ ವರ್ಷದ ಜನವರಿಯಲ್ಲಿ ಯುಎಇನಲ್ಲಿ ವೌಲ್ಯವರ್ಧಿತ ತೆರಿಗೆ (ವ್ಯಾಟ್)ಪದ್ಧತಿ ಜಾರಿಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಕ್ರಮವಾಗಿ ಆಮದು ಉತ್ಪನ್ನಗಳಿಗೆ ಹಾಗೂ ಸರಕು ಮತ್ತು ಸೇವೆಗಳ ಉತ್ಪಾದನೆ ಹಾಗೂ ವಿತರಣೆಯ ಪ್ರತಿ ಹಂತದಲ್ಲೂ ಶೇ.5ರಷ್ಟು ವೌಲ್ಯಾಧಾರಿತ ತೆರಿಗೆಯನ್ನು ವಿಧಿಸುವ ಕುರಿತಾಗಿ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ರವಿವಾರ ಅಧ್ಯಾದೇಶವೊಂದನ್ನು ಜಾರಿಗೊಳಿಸಿದ್ದಾರೆ.
‘‘ ಶೇಖ್ ಖಲೀಫಾ ಬಿನ್ ಝಾಯೆದ್ ಅವರು ಜಾರಿಗೊಳಿಸಿರುವ ಫೆಡರಲ್ ಅಧ್ಯಾದೇಶವು ಯುಎಇನ ಯೋಜಿತ ತೆರಿಗೆ ವ್ಯವಸ್ಥೆಯ ತಳಹದಿಯಾಗಲಿದೆ’’ ಎಂದು ಯುಎಇನ ವಿತ್ತ ಸಚಿವ ಹಾಗೂ ಫೆಡರಲ್ ತೆರಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ದುಬೈನ ಉಪ ಆಡಳಿತಗಾರ ಶೇಖ್ ಹಮ್‌ದಾನ್ ಬಿನ್ ರಶೀದ್ ಅಲ್ ಮಖ್ತೂಮ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮುಂದಿನ ಎರಡು ವರ್ಷಗಳೊಳಗೆ ವೌಲ್ಯ ವರ್ಧಿತ ತೆರಿಗೆ ಪದ್ಧ ಎಲ್ಲಾ ಗಲ್ಫ್ ಸಹಕಾರ ಮಂಡಳಿಯ ದೇಶಗಳಲ್ಲಿ ಜಾರಿಗೊಳ್ಳಲಿದ್ದು, ರಾಷ್ಟ್ರೀಯ ಆರ್ಥಿಕತೆ ಹಾಗೂ ನಿವ್ವಳ ಆಂತರಿಕ ಉತ್ಪನ್ನಕ್ಕೆ ಹೊಸ ವರಮಾನವನ್ನು ತಂದುಕೊಡಲಿದೆಯೆಂದು ಅವರು ಹೇಳಿದ್ದಾರೆ.





