ರೈತರ ಸಾಲ ಕೇಂದ್ರ ಮನ್ನಾ ಮಾಡಲು ಬಿಜೆಪಿ ಮುಖಂಡರು ಒತ್ತಡ ಹೇರಲಿ : ವಿನಯಕುಮಾರ್ ಸೊರಕೆ
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಹವಾನಿಯಂತ್ರಿತ ಎರ್ಮಾಳು ಶಾಖೆ ಉದ್ಘಾಟನೆ

ಪಡುಬಿದ್ರಿ,ಆ.28: ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಬಿಜೆಪಿ ಮುಖಂಡರು ಒತ್ತಡ ಹೇರಬೇಕು ಎಂದು ಶಾಸಕ ವಿನಯಕುಮಾರ್ ಸೊರಕೆ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ 66 ರ ಕಮಲಲಕ್ಷ್ಮಣ ಟವರ್‍ಗೆ ಸ್ಥಳಾಂತರಗೊಂಡ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಹವಾನಿಯಂತ್ರಿತ ಎರ್ಮಾಳು ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಲ್ಲಿದ್ದ ರೈತರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ರಾಜ್ಯದಲ್ಲಿ ಶೇಕಡಾ 80 ರಷ್ಷು ರೈತರ ಸಾಲಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಇವೆ ಎಂದರು.
ಬ್ಯಾಂಕ್‍ನ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಮಂಗಳೂರು ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 1 ರಿಂದ 20 ರೊಳಗಿನ ಅವಧಿಯಲ್ಲಿ ಸಾಲ ಮರುಪಾವತಿಸಿದವರಿಗೆ ರಾಜ್ಯ ಸರ್ಕಾರದ ಸಾಲಮನ್ನಾದಿಂದ ಪ್ರಯೋಜನವಾಗಿಲ್ಲ. ಅವರ ಸಾಲ ಮನ್ನಾ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.
ಮೇಕಪ್ ಕೊಠಡಿಗೆ ಡಿಸಿಸಿ ವೆಚ್ಚ: ಪಡುಬಿದ್ರಿ ಸಿಎ ಬ್ಯಾಂಕ್‍ನ ಎರ್ಮಾಳು ಶಾಖೆಯ ಹವಾನಿಯಂತ್ರಿತ ವೆಚ್ಚವನ್ನು ಕೇಂದ್ರ ಸಹಕಾರಿ ಬ್ಯಾಂಕ್ ಭರಿಸಲಿದೆ. ಭದ್ರತಾ ಕೊಠಡಿಯಲ್ಲಿರಿಸಿದ ಚಿನ್ನಾಭರಣವನ್ನು ಗ್ರಾಹಕರು ಧರಿಸಿಕೊಂಡು ಹೋಗಲು ಅನುಕೂಲವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿ ಮೇಕಪ್ ಕೊಠಡಿ ನಿರ್ಮಾಣ ಮಾಡಲು ಸ್ಥಳವಾಕಾಶ ನೀಡಿದರೆ ಅದರ ವೆಚ್ಚವನ್ನೂ ಡಿಸಿಸಿ ಬ್ಯಾಂಕ್ ನೀಡಲಿದೆ ಎಂದು ಎಂ.ಎನ್. ರಾಜೇಂದ್ರಕುಮಾರ್ ಹೇಳಿದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಠೇವಣಿ ಪತ್ರ ಬಿಡುಗಡೆ ಮಾಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಕರಾಟೆಪಟು ಚೈತ್ರಾ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.
ಸಿಎ ಬ್ಯಾಂಕ್ ಅಧ್ಯಕ್ಷ ವೈ ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯ್ತಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೇಶವ ಮೊಯಿಲಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅರುಣಾ ಕುಮಾರಿ, ಉಡುಪಿ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಕರ್ಜೆ, ಉದ್ಯಮಿ ಶೇಖರ ಕೆ ಕರ್ಕೇರ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ ನಾಯಕ್ ಕಟ್ಟಡದ ಮಾಲೀಕ ವೈ ದಾಮೋದರ್, ಬ್ಯಾಂಕ್‍ನ ಉಪಾಧ್ಯಕ್ಷ ಗುರುರಾಜ ಪೂಜಾರಿ ಇದ್ದರು.







