ಅಮಾನತ್ ಬ್ಯಾಂಕ್ ಪುನರ್ ಆರಂಭಕ್ಕೆ ಬ್ಯಾಂಕ್‌ನ ಶೇರುದಾರರು ನೆರವು ನೀಡಬೇಕು: ಆಲಂ ಪಾಷ

ಬೆಂಗಳೂರು, ಆ.28: ಮುಸ್ಲಿಮ್ ಸಮುದಾಯದ ಪಾಲಿಗೆ ಅತ್ಯಂತ ಪ್ರತಿಷ್ಠಿತವಾಗಿದ್ದ ಅಮಾನತ್ ಬ್ಯಾಂಕ್ ಅನ್ನು ಪುನರ್ ಆರಂಭಿಸಲು ಬ್ಯಾಂಕ್‌ನ ಶೇರುದಾರರು ತಮ್ಮ ನೆರವು ನೀಡಬೇಕು ಎಂದು ಉದ್ಯಮಿ ಹಾಗೂ ಹೆಲ್ಪಿಂಗ್‌ಸಿಟಿಜನ್ ಸಂಸ್ಥೆಯ ಸಂಸ್ಥಾಪಕ ಆಲಂ ಪಾಷ ಕರೆ ನೀಡಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮಾನತ್‌ಬ್ಯಾಂಕ್ ಸಂಪೂರ್ಣವಾಗಿ ಕಾರ್ಯಸ್ಥಗಿತಗೊಳಿಸುವುದನ್ನು ಈಗಲೂ ತಡೆಯಬಹುದಾಗಿದೆ. ಈ ಬ್ಯಾಂಕ್ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಹಲಾವರು ಬಿಲ್ಡರ್‌ಗಳು ಲಾಭವನ್ನು ಪಡೆದುಕೊಂಡಿದ್ದಾರೆ. ಈಗ ಬ್ಯಾಂಕ್ ಕಷ್ಟದಲ್ಲಿದೆ. ಆದರೆ, ಆ ಬಿಲ್ಡರ್ ಮಾತ್ರ ವೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.
ಅಮಾನತ್ ಬ್ಯಾಂಕ್ ಕೇವಲ ಮುಸ್ಲಿಮರಿಗೆ ಸೀಮಿತವಾಗಿರಲಿಲ್ಲ. ಸಮಾಜದ ಎಲ್ಲ ವರ್ಗದ ಜನರು ಈ ಬ್ಯಾಂಕ್‌ನಲ್ಲಿ ವ್ಯವಹರಿಸುತ್ತಿದ್ದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಸಮಾಜಘಾತುಕ ಶಕ್ತಿಗಳ ಕೈವಾಡದಿಂದಾಗಿ ಈ ಬ್ಯಾಂಕ್ ಅವಸಾನದ ಅಂಚಿಗೆ ಬಂದು ನಿಂತಿದೆ ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) 60 ಕೋಟಿ ರೂ.ಗಳನ್ನು ಅಮಾನತ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿರುವ ಬಡವರಿಗೆ ಪಾವತಿಸುವಂತೆ ಆದೇಶ ನೀಡಿತ್ತು. ಆದರೆ, ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸದೆ, ಬೇರೆ ಖಾತೆಗಳಲ್ಲಿ ಆ ಹಣವನ್ನಿಟ್ಟುಕೊಂಡು ಕಾನೂನು ಬಾಹಿರವಾಗಿ ಬಳಸಿಕೊಳ್ಳುತ್ತಿದೆ ಎಂದು ಆಲಂ ಪಾಷ ಆರೋಪಿಸಿದರು.
ಬಜಾಜ್ ಫೈನಾನ್ಸ್, ಚೋಲಾ ಫೈನಾನ್ಸ್ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಸಾವಿರಾರು ಕೋಟಿ ರೂ. ವ್ಯವಹಾರ ಮಾಡುತ್ತಿವೆ. ಶೆಡ್ಯೂಲ್ ಬ್ಯಾಂಕಿನ ಸ್ಥಾನಮಾನ ಹೊಂದಿರುವ ಅಮಾನತ್‌ಬ್ಯಾಂಕ್ ಈ ಸಂಸ್ಥೆಗಳಿಗಿಂತ 10 ಪಟ್ಟು ವ್ಯವಹಾರವನ್ನು ಮಾಡಲು ಸಾಧ್ಯವಿದೆ ಎಂದರು.
ಕೀಳುಮಟ್ಟದ ರಾಜಕೀಯ, ಪ್ರಭಾವಿ ರಾಜಕಾರಣಿಗಳ ಹಿಡಿತದಿಂದಾಗಿ ಅಮಾನತ್ ಬ್ಯಾಂಕ್ ನಲುಗಿ ಹೋಗಿದೆ. ಸಮುದಾಯದ ಹೆಸರಿನಲ್ಲಿ ನಡೆಯುತ್ತಿರುವ ಈ ಅಕ್ರಮಗಳು ನಾವು ತಲೆತಗ್ಗಿಸುವಂತೆ ಮಾಡಿದೆ. ಜಾತ್ಯತೀತ ಮನಸ್ಥಿತಿಯ ವ್ಯಕ್ತಿಗಳು ಈ ಬ್ಯಾಂಕಿನ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಅಮಾನತ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಗುರುರಾಜ್ ಮಾತನಾಡಿ, ಹೈಕೋರ್ಟ್ ನೀಡಿದ ಆದೇಶವನ್ನು ಪಾಲನೆ ಮಾಡಲು ಆಡಳಿತ ಮಂಡಳಿ ಮುಂದಾಗುತ್ತಿಲ್ಲ. ಒಂದು ರೀತಿಯಲ್ಲಿ ಬ್ಯಾಂಕ್‌ನಲ್ಲಿ ರಾವಣ ರಾಜ್ಯವಿದೆ. 110 ಜನ ಸಿಬ್ಬಂದಿಗಳು ಈ ಬ್ಯಾಂಕ್‌ನಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ನಾಲ್ಕು ಶಾಖೆಗಳು ಮುಚ್ಚಲ್ಪಟ್ಟಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಜುದ್ದೀನ್, ಅಲೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







