ಸ್ನೇಹಿತನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಆ. 28: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ರೌಡಿ ಸೇರಿ ಆತನ ಸಹಚರನೊಬ್ಬನನ್ನು ಇಲ್ಲಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
ರೌಡಿ ವಿನೋದ್ ಯಾನೆ ಕೋತಿ ವಿನೋದ್ ಹಾಗೂ ಆತನ ಸಹಚರನೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆ.26ರಂದು ನಗರದ ಕುಮಾರಸ್ವಾಮಿ ಲೇಔಟ್‌ನ ಕಾಶಿನಗರದಲ್ಲಿ ರಾಜ್ಯೋತ್ಸವನಗರದ ಪುನೀತ್ (19)ನ ತಲೆ ಮೇಲೆ ಕಲ್ಲು ಒತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಅಲ್ಲದೆ, ಸ್ನೇಹಿತರಾಗಿದ್ದ ಪುನೀತ್ ಹಾಗೂ ವಿನೋದ್ ನಾಲ್ಕೈದು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಕುಮಾರಸ್ವಾಮಿ ಲೇಔಟ್ ಪೊಲೀಸರು ತಿಂಗಳ ಹಿಂದೆ ರೌಡಿ ವಿನೋದ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಪುನೀತ್ ಇಲ್ಲಿಯವರೆಗೂ ಪೊಲೀಸರಿಗೆ ಸಿಗದೇ ಓಡಾಡಿಕೊಂಡಿದ್ದ. ಯುವತಿಯೊಬ್ಬಳ ವಿಚಾರದಲ್ಲಿ ಈ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ರೌಡಿ ವಿನೋದ್ ಕಲ್ಲು ಎತ್ತಿಹಾಕಿ ಪುನೀತ್‌ನನ್ನು ಕೊಲೆಗೈದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.





