10 ಉದ್ಯೋಗಿಗಳು ಇದ್ದಲ್ಲಿ ಆಂತರಿಕ ದೂರು ಸಮಿತಿ ಕಡ್ಡಾಯ

ಮಂಗಳೂರು, ಆ.28: ಸುಪ್ರೀಂ ಕೋರ್ಟಿನ ಮಾರ್ಗಸೂಚಿ ಹಾಗೂ ಸರಕಾರಿ ಆದೇಶದಂತೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ-2013 ರನ್ವಯ ಸರಕಾರಿ, ಖಾಸಗಿ, ನಿಗಮ ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳು ಇತ್ಯಾದಿ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡುವುದು ಕಡ್ಡಾಯವಾಗಿದೆ.
ಮಾಲಕರು ಅಥವಾ ಉದ್ಯೋಗದಾತರು ಮೇಲ್ಕಂಡ ಕರ್ತವ್ಯಗಳನ್ನು ನಿರ್ವಹಿಸಲು ತಪ್ಪಿದಲ್ಲಿ ರೂ.50,000 ವರೆಗೆ ದಂಡ ನೀಡಬೇಕಾಗುತ್ತದೆ. ಇಂತಹ ಕಾರ್ಯಗಳು ಪುನರಾವರ್ತನೆಯಾದಲ್ಲಿ ಪ್ರತಿ ಬಾರಿಯೂ ಕರ್ತವ್ಯ ಉಲ್ಲಂಘನೆಗಾಗಿ ದಂಡದ ಹಣದ ಎರಡರಷ್ಟು ದಂಡ ನೀಡಬೇಕಾಗುತ್ತದೆ.
10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡಿರುವ ಕುರಿತು ಸಹಿ ಮಾಡಿದ ವರದಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಕಟ್ಟಡ, ಮಂಗಳೂರು ಇಲ್ಲಿಯ ಇ-ಮೇಲ್ ವಿಳಾಸ:wcddept@gmail.com ಗೆ ಆಗಸ್ಟ್ 31 ರೊಳಗೆ ಸಲ್ಲಿಸಬೇಕು.
10 ಕ್ಕಿಂತ ಕಡಿಮೆ ಸಿಬ್ಬಂದಿಗಳಿದ್ದಲ್ಲಿ ಕೂಡ ಕಡ್ಡಾಯವಾಗಿ ಮಾಹಿತಿಯನ್ನು ಸಲ್ಲಿಸಬೇಕು. ಕೆಲಸದ ಸ್ಥಳಗಳಲ್ಲಿ ಪಾರದರ್ಶಕವಾದ ದೂರು ಪೆಟ್ಟಿಗೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. 10ಕ್ಕಿಂತ ಕಡಿಮೆ ಸಿಬ್ಬಂದಿಗಳು ಇರುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಂತಹ ಘಟನೆ ಸಂಭವಿಸಿದಲ್ಲಿ ದೂರನ್ನು ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಕೊಟ್ಟಾರ, ಉರ್ವಾಸ್ಟೋರ್, ಅಶೋಕ ನಗರ ಅಂಚೆ, ಮಂಗಳೂರು-575006, ದೂರವಾಣಿ: 0824-2451254, 2453071 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.







