ನ.1ರಿಂದ ‘ಆರೋಗ್ಯ ಭಾಗ್ಯ’ ಯೋಜನೆ ಜಾರಿಗೆ ಸಚಿವ ಸಂಪುಟ ಅಸ್ತು: ಸಚಿವ ಟಿ.ಬಿ.ಜಯಚಂದ್ರ

ಬೆಂಗಳೂರು, ಆ. 28: ರಾಜ್ಯದ ಒಂದು ಕೋಟಿ ನಲವತ್ತು ಲಕ್ಷ ಕುಟುಂಬಗಳಿಗೆ ಸರಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕಲ್ಪಿಸುವ ‘ಚಿಕಿತ್ಸೆ ಮೊದಲು ಪಾವತಿ ನಂತರ’ ಎಂಬ ಧ್ಯೇಯ ಘೋಷದಡಿ ಸರ್ವರಿಗೂ ಆರೋಗ್ಯ ರಕ್ಷಣೆ ಒದಗಿಸುವ ‘ಆರೋಗ್ಯ ಭಾಗ್ಯ ಯೋಜನೆ’ಯನ್ನು ನ.1ರಿಂದ ಜಾರಿಗೆ ತರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಸೋಮವಾರ ವಿಧಾನಸೌಧದ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ರಾಜ್ಯದ 1.40 ಕೋಟಿ ಕುಟುಂಬಗಳು ಆರೋಗ್ಯ ಕಾರ್ಡ್‌ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ ನಂತರ ಸರಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಾಗುತ್ತಾರೆ. ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಹೇಳಿದರು.
ರೈತರು, ಸರಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಅಸಂಘಟಿತ ಕಾರ್ಮಿಕರು, ರಿಕ್ಷಾ ಚಾಲಕರು, ಕೂಲಿಗಳು, ಗಣಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನೇಕಾರರು, ಪೌರ ಕಾರ್ಮಿಕರು, ನರೇಗಾ ಕಾರ್ಮಿಕರು, ಎಸ್ಸಿ-ಎಸ್ಟಿ, ಪ್ರಾಣಿಯ ದಾಳಿಗೆ ಬಲಿಯಾದವರು, ಮಾಧ್ಯಮ ಪ್ರತಿನಿಧಿಗಳು, ಸಹಕಾರ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸರಕಾರಿ ನೌಕರರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಹೇಳಿದರು.
ಈ ಯೋಜನೆಯ ವ್ಯಾಪ್ತಿಗೆ ಒಳಪಡದ ಇತರೆ ವರ್ಗದ 30 ಲಕ್ಷ ಕುಟುಂಬದವರೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಲ್ಲಿ ತಲಾ 300 ರೂ. ಹಾಗೂ ನಗರ ಪ್ರದೇಶದಲ್ಲಿ 700ರೂ. ನಂತೆ ವಾರ್ಷಿಕ ವಿಮಾ ಕಂತು ಪಾವತಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 1ರ ಬಳಿಕ ಆರೋಗ್ಯ ಯೋಜನೆಯ ಹೆಸರಿನಲ್ಲಿರುವ ಏಳು ಯೋಜನೆಗಳು ವಿಲೀನವಾಗಲಿದೆ. ರಾಜ್ಯ ಸರಕಾರ ವಾರ್ಷಿಕವಾಗಿ 869.4 ಕೋಟಿ ರೂ.ಹಣವನ್ನು ಈ ಯೋಜನೆಗೆ ವೆಚ್ಚ ಮಾಡಲಿದೆ. ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಪಡೆಯುವ ಮೊದಲು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ 48 ಗಂಟೆಗಳ ಚಿಕಿತ್ಸೆ ಪಡೆದ ನಂತರ ಸರಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಬಹುದು. ಯಾವುದೇ ರೋಗಿಗೆ ಮೊದಲು ಚಿಕಿತ್ಸೆ ನಂತರ ಹಣ ಪಾವತಿ ಎಂಬ ಧ್ಯೇಯ ಘೋಷದ ಯೋಜನೆ ಇದಾಗಿದೆ ಎಂದರು.
ಮೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಕಟ್ಟಡಕ್ಕೆ 123.77ಕೋಟಿ ರೂ.ಪೀಠೋಪಕರಣ ಗಳಿಗೆ 32.25ಕೋಟಿ ರೂ., ಬೆಳಗಾವಿಯಲ್ಲಿ ಬೆಳಗಾವಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಕಟ್ಟಡಕ್ಕೆ 140 ಕೋಟಿ ರೂ., ಪೀಠೋಪಕರಣ ಮತ್ತು ಉಪಕರಣಗಳಿಗೆ 54.27 ಕೋಟಿ ರೂ.ವೆಚ್ಚದಲ್ಲಿ ಹಾಗೂ ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಕಟ್ಟಡಕ್ಕೆ 107.06 ಕೋಟಿ ರೂ. ಮತ್ತು ಪೀಠೋಪಕರಣ ಮತ್ತು ಉಪಕರಣಗಳಿಗೆ 41.26 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಪುಟ ಆಡಳಿತಾತ್ಮಕ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ವಿವರಿಸಿದರು.







