ಮಂಗಳೂರು ಗಲಭೆಗೆ ರಾಷ್ಟ್ರೀಯ ಪಕ್ಷಗಳು ಹೊಣೆ: ಎಚ್.ಡಿ.ದೇವೇಗೌಡ

ಬೆಂಗಳೂರು, ಆ.28: ಮಂಗಳೂರು ಗಲಭೆಗೆ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಹೊಣೆ. ಪ್ರಕ್ಷುಬ್ಧ ವಾತಾವರಣ ನಿರ್ಮಿಸುವುದೇ ಇವರ ಉದ್ದೇಶವಾಗಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಲಭೆಗಳನ್ನು ಹುಟ್ಟು ಹಾಕುವುದು ಇವರ ಉದ್ದೇಶ. ಈ ವಿಚಾರದಲ್ಲಿ ಆ ಜಿಲ್ಲೆಯ ಸಚಿವರ ತಪ್ಪು ಹೆಚ್ಚಿದೆ. ಪ್ರಚೋದನಕಾರಿ ಹೇಳಿಕೆಗಳು ವಿನಿಮಯವಾಗಿವೆ. ನನ್ನ ಅಧಿಕಾರವಧಿಯಲ್ಲಿ ಇಂತಹ ಒಂದೇ ಒಂದು ಘಟನೆ ನಡೆದಿರಲಿಲ್ಲ ಎಂದರು.
ಬಿಹಾರದಲ್ಲಿ ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್ ಆಯೋಜಿಸಿದ್ದ ‘ಭಾಜಪ ಭಗಾವೋ, ದೇಶ್ ಬಚಾವೋ’ ರ್ಯಾಲಿಗೆ ನನ್ನ ಸಂಪೂರ್ಣ ಬೆಂಬಲವಿದೆ. ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಬಿಹಾರಕ್ಕೆ ಹೋಗುತ್ತೇನೆ. ಸದ್ಯ ರಾಜ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಗಮನ ಹರಿಸಿದ್ದೇನೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎರಡು ರಾಷ್ಟ್ರೀಯ ಪಕ್ಷಗಳು ಬಹಳ ವೇಗವಾಗಿ ಓಡಾಡುತ್ತಿವೆ. ಪ್ರಾದೇಶಿಕ ಪಕ್ಷವಾಗಿ ನಾವು ಹೋಗಲಿಲ್ಲ ಎಂದರೆ ಹಿಂದೆ ಬೀಳುತ್ತೇವೆ. ಈ ಹಿಂದೆ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್‌ನವರು ಪಾಂಚಜನ್ಯ ಊದಿದ್ದರು. ಅವರು ಪಾಂಚಜನ್ಯವಾದರೂ ಊದಲಿ, ಶಂಖಾನಾದ್ರೂ ಊದಲಿ, ನಾವೇನೂ ಊದಲ್ಲ. ನಾವು ಆರ್ಥಿಕವಾಗಿ ದುರ್ಬಲರಾಗಿದ್ದೆವೆ. ಆದರೆ, ಕೆಚ್ಚೆದೆಯಿಂದ ಹೋರಾಡುವ ಶಕ್ತಿಯಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ತೋರಿಸಿದ್ದಾರೆ. ಅವರ ಮೇಲೆ ಜಂತಕಲ್ ಗಣಿ ವಿಚಾರ ಬಿಟ್ಟರೆ, ಯಾವುದೇ ಆರೋಪ ಇಲ್ಲ. ದೇವೇಗೌಡನ ಮೇಲೆಯೂ ಯಾವುದೇ ಆರೋಪಗಳಿಲ್ಲ. ಬೇಕಾದರೆ ಪರಿಶೀಲನೆ ಮಾಡಬಹುದು. ನನ್ನ ಹತ್ತಿರ ಎಷ್ಟು ಪಂಚೆಗಳಿವೆ ಎಂದು ಮಾತ್ರ ನೋಡಬಹುದು. ಆರ್ಥಿಕವಾಗಿ ಬಡವನಾದರೂ, ಹೋರಾಟ ಮಾಡೋ ಕೆಚ್ಚಿದೆ ಎಂದರು.
ಸೆಪ್ಟೆಂಬರ್ 22 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಲು ತಿರ್ಮಾನಿಸಿದ್ದೇವೆ. ಹಿರಿಯ ಮುಖಂಡರ ನೇತೃತ್ವದಲ್ಲಿ 7 ತಂಡಗಳನ್ನು ರಚನೆ ಮಾಡಲಾಗಿದೆ. ಎರಡು ವಾರಕ್ಕೊಮ್ಮೆ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದು ದೇವೇಗೌಡ ತಿಳಿಸಿದರು.
ಎಚ್‌ಡಿಕೆ ಇಸ್ರೇಲ್ ಭೇಟಿ: ರೈತರ ಸಮಸ್ಯೆಗಳಿಗೆ ಕೆಲ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಕಡಿಮೆ ನೀರಿನಲ್ಲಿ ಹೆಚ್ಚು ಕೃಷಿ, ಉತ್ತಮ ಮಾರುಕಟ್ಟೆ, ಕೃಷಿ ರಫ್ತು ಇವೆಲ್ಲದರ ಬಗ್ಗೆ ಅಧ್ಯಯನಕ್ಕೆ ಹೋಗಿದ್ದಾರೆ ಎಂದು ದೇವೇಗೌಡ ಹೇಳಿದರು.
ಪಕ್ಷದ ಅಧ್ಯಕ್ಷ, ಕಾರ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಗಳ ಬದಲಾವಣೆ ಇಲ್ಲ. ಉಳಿದಂತೆ ಪದಾಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನಾಮಕಾವಸ್ತೆಯಲ್ಲಿ ಪದಾಧಿಕಾರಿಗಳಾಗಿ ಇರುವಂತಿಲ್ಲ. ಕೆಲಸ ಮಾಡದೆ ಸುಮ್ಮನೆ ಕೂತಿದ್ದರೆ ತಕ್ಷಣವೆ ಅವರನ್ನು ತೆಗೆಯಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕ ಪಿಳ್ಳ ಮುನಿಸ್ವಾಮಪ್ಪ, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಝಫರುಲ್ಲಾಖಾನ್, ಮಾಜಿ ಸಚಿವ ಎಚ್.ಸಿ.ನೀರಾವರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







