‘ಗದ್ದೆಯಲ್ಲಿ ಯುವ ಒಗ್ಗಟ್ಟು’: ಕೊಳಲಗಿರಿ ತಂಡ ಚಾಂಪಿಯನ್

ಉಡುಪಿ, ಆ.28: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಟಪಾಡಿ ಸಂತ ವಿನ್ಸೆಂಟ್ ಡಿಪಾವ್ಲ್ ದೇವಾಲಯದ ಭಾರತೀಯ ಕೆಥೊಲಿಕ್ ಯುವ ಸಂಚಾಲನದ ವತಿಯಿಂದ ಉಡುಪಿ ವಲಯ ಐಸಿವೈಎಮ್ ಸಹಕಾರ ದೊಂದಿಗೆ ಕಟಪಾಡಿ ಚೊಕ್ಕಾಡಿ ಬಳಿಯ ಗದ್ದೆಯಲ್ಲಿ ರವಿವಾರ ಉಡುಪಿ ಧರ್ಮಪ್ರಾಂತದ ಯುವಜನರಿಗಾಗಿ ಏರ್ಪಡಿಸಲಾದ ‘ಗದ್ದೆಯಲ್ಲಿ ಯುವ ಒಗ್ಗಟ್ಟು’ ಕ್ರೀಡಾಕೂಟದಲ್ಲಿ ಕಲ್ಯಾಣಪುರ ವಲಯದ ಐಸಿವೈಎಂ ಕೊಳಲಗಿರಿ ತಂಡ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಕಾರ್ಕಳ ಅತ್ತೂರು ತಂಡ ಮತ್ತು ಶಿರ್ವ ವಲಯದ ಶಂಕರಪುರ ಘಟಕಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡವು. ಹಗ್ಗಜಗ್ಗಾಟದಲ್ಲಿ ಕಣಜಾರು ಪ್ರಥಮ, ಅತ್ತೂರು ಕಾರ್ಕಳ ದ್ವಿತೀಯ, ರಿಲೆಯಲ್ಲಿ ಮೂಡುಬೆಳ್ಳೆ ಪ್ರಥಮ, ಮಣಿಪಾಲ ದ್ವೀತಿಯ, ತ್ರೋಬಾಲ್‌ನಲ್ಲಿ ಕುಂತಲನಗರ ಪ್ರಥಮ, ಪೆರಂಪಳ್ಳಿ ದ್ವಿತೀಯ, ವಾಲಿಬಾಲ್‌ನಲ್ಲಿ ನಕ್ರೆ ಪ್ರಥಮ, ಗಂಗೊಳ್ಳಿ ದ್ವಿತೀಯ ಸ್ಥಾನ ಪಡೆದವು.
ಆರಂಭದಲ್ಲಿ ಕಟಪಾಡಿ ಚರ್ಚಿನಿಂದ ಚೊಕ್ಕಾಡಿ ಗದ್ದೆಯ ತನಕ ನಡೆದ ಮೆರವಣಿಗೆಗೆ ಕಟಪಾಡಿ ಗ್ರಾಪಂ ಅಧ್ಯಕ್ಷೆ ಜೂಲಿಯೆಟ್ ವೀರಾ ಡಿಸೋಜ ಚಾಲನೆ ನೀಡಿದರು. ಸ್ಪರ್ಧಾಕೂಟವನ್ನು ಕಾಪು ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು. ಉಡುಪಿ ಕ್ರೈಸ್ತ ಧರ್ಮಪ್ರಾಂತದ ಶ್ರೇಷ್ಠಗುರು ವಂ ಬ್ಯಾಪ್ಟಿಸ್ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು.
ಅದಾನಿ ಯುಪಿಸಿಎಲ್‌ನ ಜಂಟಿ ನಿರ್ದೇಶಕ ಕಿಶೋರ್ ಆಳ್ವ, ಕಟಪಾಡಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೆಸ್ಲಿ ಸುವಾರಿಸ್, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, ಮಾಜಿ ಜಿಪಂ ಸದಸ್ಯೆ ಐಡಾ ಗಿಬ್ಬಾ ಡಿಸೋಜ, ವಂ. ಲಾರೆನ್ಸ್ ಕುಟಿನ್ಹಾ, ವಂ.ಎಡ್ವಿನ್ ಡಿಸೋಜ, ಶರ್ಲಿನ್ ಡೆಸಾ, ವಂ.ಟೆರೆನ್ಸ್, ಸಿ.ಟೆರ್‌ಸಿಟಾ, ಆಗ್ನೆಲ್ ಡಿಸಿಲ್ಲಾ ಉಪಸ್ಥಿತರಿದ್ದರು.
ಸಮಾರೋಪ: ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ವಿಜೇತರಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು, ತುಳುನಾಡಿನ ರೈತರ ಸಂಪೂರ್ಣ ಜೀವನ ಮಣ್ಣಿನೊಂದಿಗೆ ಇರು ವುದರಿಂದ ಇದರ ಪರಿಚಯವನ್ನು ಇಂದಿನ ಯುವಜನತೆಗೆ ಮಾಡಬೇಕಾಗಿದೆ ಎಂದು ಹೇಳಿದರು.
ಉಡುಪಿ ಧರ್ಮಪ್ರಾಂತದ ಚಾನ್ಸಲರ್ ವಂ.ವಲೇರಿಯನ್ ಮೆಂಡೊನ್ಸಾ, ರಾಜ್ಯ ಸರಕಾರದ ಕ್ರೈಸ್ತ ಅಭಿವೃದ್ಧಿ ಸಮಿತಿಯ ಸದಸ್ಯ ಪ್ರಶಾಂತ್ ಜತ್ತನ್ನ ಮುಖ್ಯಅತಿಥಿಗಳಾಗಿದ್ದರು. ಕಟಪಾಡಿ ಚರ್ಚಿನ ಧರ್ಮಗುರು ವಂ. ರೋನ್ಸನ್ ಡಿಸೋಜ, ಐಸಿವೈಎಂ ಅಧ್ಯಕ್ಷ ಲೈನಲ್ ಪಿರೇರಾ, ಸಚೇತಕರಾದ ವಿಲ್ಫ್ರೇಡ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧಾಕೂಟದಲ್ಲಿ ವಾಲಿಬಾಲ್, ತ್ರೋಬಾಲ್, ಓಟ, ಹೆಗಲ ಮೇಲೆ ಇನ್ನೊಬ್ಬರನ್ನು ಹೊತ್ತೊಯ್ಯುವುದು, ಪಿರಮಿಡ್, ರಿಲೆ, ಮೂರು ಕಾಲಿನ ಓಟ, ಹಗ್ಗ ಜಗ್ಗಾಟ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಯುವಕರು ಗದ್ದೆಯ ಕೆಸರಿನಲ್ಲಿ ಹುಚ್ಚೆದ ಕುಣಿದ ಸಂಭ್ರಮಿಸಿ ದರು. ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಸುಮಾರು 750ಕ್ಕೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದ್ದರು.







