ಜಾಗತಿಕ ಬಂಟ ಪ್ರತಿಷ್ಠಾನದ ಯಕ್ಷ ಪ್ರಶಸ್ತಿಗೆ ಉಬರಡ್ಕ ಉಮೇಶ ಶೆಟ್ಟಿ ಆಯ್ಕೆ

ಮಂಗಳೂರು,ಆ.28: ಜಾಗತಿಕ ಬಂಟ ಪ್ರತಿಷ್ಠಾನವು ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಡಾ.ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿಗೆ ಸತತ 44 ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡಿದ ಪ್ರಸಿಧ್ಧ ವೇಷಧಾರಿ ಉಬರಡ್ಕ ಉಮೇಶ ಶೆಟ್ಟಿ ಆಯ್ಕೆಯಾಗಿದ್ದಾರೆ.ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಕರ್ನಾಟಕ ಬಯಲಾಟ ಅಕಾಡೆಮಿಯ ಪ್ರಸಕ್ತ ಸದಸ್ಯ ಪಳ್ಳಿ ಕಿಶನ್ ಹೆಗ್ಡೆ ಹಾಗೂ ಹಿರಿಯ ಕಲಾಪೋಷಕ ಪ್ರೊ.ಜಿ.ಆರ್. ರೈಅವರನ್ನೊಳಗೊಂಡ ಆಯ್ಕೆಸಮಿತಿಯು ಉಮೇಶ ಶೆಟ್ಟರನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ.
ಯಕ್ಷಗಾನದ ದಂತಕಥೆ ಅಳಿಕೆ ರಾಮಯ್ಯ ರೈಯವರ ಸೋದರಳಿಯನಾದ ಉಬರಡ್ಕರಿಗೆ ಶ್ರೇಷ್ಠ ಕಲಾಪರಂಪರೆಯ ಹಿನ್ನೆಲೆಯಿದೆ. ತನ್ನ 14 ನೇ ವಯಸ್ಸಿನಲ್ಲಿ ಧರ್ಮಸ್ಥಳ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಯಾಗಿ ದಿ.ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ ಮಾಡಿದ ಶೆಟ್ಟರು ಬಳಿಕ ಕ್ಷೇತ್ರದ ಮೇಳದಲ್ಲೇ ವೃತ್ತಿ ಕಲಾವಿದರಾಗಿ ಸೇರಿದರು. ಪುತ್ತೂರು ನಾರಾಯಣ ಹೆಗ್ಡೆಯವರ ಕಾಲಾನಂತರ 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ'ಯ 'ಅಣ್ಣಪ್ಪ'ಪಾತ್ರವನ್ನು ಅವರಷ್ಟೇ ಪರಿಣಾಮಕಾರಿಯಾಗಿ ನಿರ್ವಹಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಕಂಸ,ಹಿರಣ್ಯಕಶ್ಯಪ,ದ್ರೋಣ,ಋತುಪರ್ಣ,ಅತಿಕಾಯ,ಹನುಮಂತ.. ಇತ್ಯಾದಿ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟವು.
ಸಭ್ಯ,ಸುಸಂಸ್ಕೃತ ವ್ಯಕ್ತಿತ್ವದ ಉಮೇಶ ಶೆಟ್ಟಿ ಕಲಾ ಸಾಧನೆಗೆ ಬಹೆರೈನ್ ಕನ್ನಡ ಸಂಘ,ಕುವೈಟ್ ಬಂಟಾಯನ,ಧರ್ಮಸ್ಥಳ ಕ್ಷೇತ್ರ,ಎಡನೀರು ಮಠ,ಶ್ರೀಕೃಷ್ಣ ಯಕ್ಷಸಭಾ,ಸತ್ಯಸಾಯಿ ವಿದ್ಯಾಸಂಸ್ಥೆ ..ಮೊದಲಾದೆಡೆ ಗೌರವ-ಸಮ್ಮಾನಗಳು ಲಭಿಸಿವೆ. 2015 ರಲ್ಲಿ ಮೇಳದ ತಿರುಗಾಟದಿಂದ ನಿವೃತ್ತರಾದ ಅವರು ಯಕ್ಷಗಾನದಲ್ಲಿ ಈಗಲೂ ಪ್ರವೃತ್ತರು.
ಸೆ.3 ರಂದು ಮಂಗಳೂರಿನ ಮೋತಿಮಹಲ್ ಸಭಾಂಗಣದಲ್ಲಿ ಬಿ.ಸಚ್ಚಿದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗುವ ಜಾಗತಿಕ ಬಂಟ ಪ್ರತಿಷ್ಠಾನದ ಮಹಾಸಭೆಯಲ್ಲಿ ಉಬರಡ್ಕ ಉಮೇಶ ಶೆಟ್ಟಿ ಅವರಿಗೆ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡಲಾಗುವುದೆಂದು ಟ್ರಸ್ಟ್ ನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ ತಿಳಿಸಿದ್ದಾರೆ.







