ಕ್ಯಾಂಟರ್- ಕಾರು ಢಿಕ್ಕಿ: ಆರು ಮಂದಿ ಮೃತ್ಯು

ಶಿವಮೊಗ್ಗ, ಆ. 28: ಕ್ಯಾಂಟರ್ ಹಾಗೂ ಕಾರು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಹೊಸನಗರ ತಾಲೂಕಿನ ಬ್ರಹ್ಮೇಶ್ವರದ ಅಂಬೇಡ್ಕರ್ ಕಾಲನಿಯ ನಿವಾಸಿಗಳಾದ ಅಶೋಕ್ (25), ಕಿರಣ್ (24), ನವೀನ (24), ಕೇಶವ (19), ಮಾರಿಮುತ್ತು (25) ಹಾಗೂ ಕಾರ್ತಿಕ್ (25) ಮೃತಪಟ್ಟವರೆಂದು ಗುರುತಿಸಲಾಗಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಸಂತೋಷ್ ಹಾಗೂ ಕ್ಯಾಂಟರ್ ಚಾಲಕ ಮಹಾಂತೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯುವಕರೆಲ್ಲರೂ ಬ್ರಹ್ಮೇಶ್ವರ ಗ್ರಾಮದ ಸುತ್ತಮುತ್ತಲು ಕಲ್ಲುಕೋರೆ ಮತ್ತಿತರೆಡೆ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಎಸ್ಪಿ ಮುತ್ತುರಾಜ್, ಇನ್ ಸ್ಪೆಪೆಕ್ಟರ್ ಮಹಾಂತೇಶ್, ಸಬ್ ಇನ್ ಸ್ಪೆಪೆಕ್ಟರ್ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರು ಚಾಲಕನ ಅಜಾಗರೂಕತೆ, ವೇಗದ ಚಾಲನೆಯಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಸ್ವಿಫ್ಟ್ ಡಿಸೈರ್ ಕಾರು ಬ್ರಹ್ಮೇಶ್ವರದಿಂದ ಶಿವಮೊಗ್ಗದೆಡೆಗೆ ಹಾಗೂ ಬೆಂಗಳೂರಿನಿಂದ ಲಿಕ್ಕರ್ ಬಾಕ್ಸ್ ತರುತ್ತಿದ್ದ ಕ್ಯಾಂಟರ್ ಲಾರಿಯು ಶಿವಮೊಗ್ಗದಿಂದ ಸಾಗರದೆಡೆಗೆ ತೆರಳುತ್ತಿದ್ದಾಗ ಈ ಭೀಕರ ಅವಘಡ ಸಂಭವಿಸಿದೆ. ಕಾರು ಹಾಗೂ ಕ್ಯಾಂಟರ್ ಢಿಕ್ಕಿ ಹೊಡೆದ ರಭಸಕ್ಕೆ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಿಂದ ಕಾರಿನಲ್ಲಿದ್ದ ಮೃತಗಳು ಕಾರಿನೊಳಗೆ ಸಿಲುಕಿದ್ದವು. ಸಾರ್ವಜನಿಕರು ಹರಸಾಹಸ ನಡೆಸಿ ಕಾರಿನಿಂದ ಮೃತಗಳನ್ನು ಹೊರತಗೆದಿದ್ದಾರೆ.
ಅಸ್ತವ್ಯಸ್ತ: ಅವಘಡದಿಂದ ಶಿವಮೊಗ್ಗ ಹಾಗೂ ಸಾಗರ ರಸ್ತೆಯ ನಡುವೆ ಕೆಲ ಸಮಯ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಿರಂತರ ಅವಘಡ: ಶಿವಮೊಗ್ಗ ಹಾಗೂ ಸಾಗರ ನಡುವಿನ ರಾಷ್ಟ್ರೀಯ ಹೆದ್ದಾರಿ 206 ಅಪಘಾತಗಳ ವಲಯವಾಗಿ ಪರಿವರ್ತಿತವಾಗಿದೆ. ದಿನದಿಂದ ದಿನಕ್ಕೆ ಈ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಸಾವು-ನೋವಿಗೆ ತುತ್ತಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ಸಾಗರದ ಆನಂದಪುರಂ ಸಮೀಪ ಸಂಭವಿಸಿದ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿದ್ದರು.







