ಪ್ರತಿ ಭಾಷೆ ತನ್ನ ನೆಲದಲ್ಲಿ ಪಾರಮ್ಯ ಹೊಂದಿರಬೇಕು: ನಾಗತಿಹಳ್ಳಿ

ಮಣಿಪಾಲ, ಆ.28: ಪ್ರತಿಯೊಂದು ಭಾಷೆಯೂ ತನ್ನ ನೆಲದಲ್ಲಿ ಪಾರಮ್ಯ ವನ್ನು ಹೊಂದಿರಬೇಕು. ಪ್ರಾದೇಶಿಕ ಭಾಷೆಯೊಂದು ಅವನತಿ ಹೊಂದಿದರೆ, ಅದರೊಂದಿಗೆ ಆ ಪ್ರದೇಶದ ಸಾಂಸ್ಕೃತಿಕ ಸಂಪತ್ತು ಜಗತ್ತಿನಿಂದ ನಶಿಸಿಹೋಗುವ ಆತಂಕವಿದೆ ಎಂದು ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಮಣಿಪಾಲ ವಿವಿಯ ಸಿಎಲ್‌ಐಎಲ್ ವತಿಯಿಂದ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಆಯೋಜಿಸಲಾದ ‘ಭಾಷಾ ರಾಜಕೀಯ ಮತ್ತು ಕಲಿಕಾ ಮಾಧ್ಯಮ: ಬಹುಭಾಷಾ ಜಗತ್ತಿನ ಸವಾಲುಗಳು’ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಅವರು ತನ್ನ ಅಭಿಪ್ರಾಯಗಳನ್ನು ಮಂಡಿಸಿ ಮಾತನಾಡುತಿದ್ದರು.
ಭಾಷೆಯ ಜೊತೆಗೆ ಅನೇಕ ಸಾಂಸ್ಕೃತಿಕ ವಿಷಯಗಳು ತಳಕುಹಾಕಿಕೊಂಡಿವೆ. ಭಾಷೆಯೊಂದು ಅಳಿದರೆ, ಇವೆಲ್ಲವೂ ಕಡಿದುಕೊಂಡು ಹೋಗುತ್ತವೆ. ಇಂಥ ದಿನಗಳು ಕನ್ನಡಕ್ಕೆ ಬಾರದಿರಲಿ ಎಂದವರು ಆತಂಕದಿಂದ ನುಡಿದರು.
ಕಲಿಕಾ ಮಾಧ್ಯಮದ ಕುರಿತಂತೆ, ರಾ.ಶಿಕ್ಷಣ ನೀತಿಯ ಕುರಿತಂತೆ ದೇಶದ ಉಚ್ಚ ನ್ಯಾಯಾಲಯ ನೀಡಿದ ತೀರ್ಪು, ಪ್ರಾದೇಶಿಕ ಭಾಷೆಗಳ ವಿರುದ್ಧ ಬಂದ ತೀರ್ಪಲ್ಲ. ಇಂಗ್ಲೀಷ್ ಶಾಲೆಗಳು ಲಾಬಿಯ ಮೂಲಕ ಪಡೆದುಕೊಂಡ ತೀರ್ಪು. ನಮ್ಮ ಇಚ್ಛಾಶಕ್ತಿಯ ಕೊರತೆಯಿಂದ ಬಂದಿರುವ ತೀರ್ಪು ಇದಾಗಿದೆ ಎಂದವರು ಅಭಿಪ್ರಾಯಪಟ್ಟರು.
ತನ್ನ ‘ಅಮೆರಿಕಾ ಅಮೆರಿಕಾ’ ಹಾಗೂ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರವನ್ನು ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶಿಸಿದಾಗ ಅದನ್ನು ಮೆಚ್ಚಿದ ಪ್ರೆಂಚ್ ವಿಮರ್ಶಕರೊಬ್ಬರು ಈ ಚಿತ್ರವನ್ನು ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸಿದ್ದರೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸುತ್ತಿತ್ತು ಎಂದು ಸಲಹೆ ನೀಡಿದರು. ಆದರೆ ಇದನ್ನು ನಾನು ಕನ್ನಡದಲ್ಲಿ ಮಾತ್ರ ಮಾಡಲು ಸಾಧ್ಯ. ಬೇರೆ ಯಾವುದೇ ಭಾಷೆಯಲ್ಲಿ ಇದನ್ನು ಮಾಡಲು ನನಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದೆ ಎಂದರು.
ಕಲಿಕೆಯಲ್ಲಿ ಮಾಧ್ಯಮವಾಗಿ ಕನ್ನಡವನ್ನು ಸಮರ್ಥಿಸಿಕೊಳ್ಳುವುದೆಂದರೆ ಅದೊಂದು ಭಾವನಾತ್ಮಕ ಪ್ರತಿಕ್ರಿಯೆಯಲ್ಲ. ಭಾಷೆಯೊಂದು ಸರಕಲ್ಲ. ಅದು ನಮ್ಮೆಲ್ಲರ ಅಂತರಾತ್ಮದ ಧ್ವನಿ. ಮಗು ಎಷ್ಟು ಭಾಷೆಯನ್ನು ಬೇಕಿದ್ದರೆ ಕಲಿಯಲಿ. ಆದರೆ ಮಾತೃಭಾಷೆಯನ್ನು ಮಾತ್ರ ನಿರ್ಲಕ್ಷಿಸಬಾರದು. ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ರಕ್ಷಿಸಲು ಸಂವಿಧಾನ ತಿದ್ದುಪಡಿಯೊಂದು ಆಗಲೇ ಬೇಕಿದೆ ಎಂದು ನಾಗತಿಹಳ್ಳಿ ಹೇಳಿದರು.
ಬೆಂಗಳೂರು ದೂರದರ್ಶನದಲ್ಲಿ ‘ಥಟ್ ಅಂಥ ಹೇಳಿ’ ಕಾರ್ಯಕ್ರಮದ ನಿರೂಪಕ ಹಾಗೂ ಕನ್ನಡ ಹೋರಾಟಗಾರ ಡಾ.ನಾ.ಸೋಮೇಶ್ವರ್ ಅವರು ಮಾತನಾಡಿ, ಮಗುವಿನ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಬೆಳೆವಣಿಗೆಯು ಶಿಕ್ಷಣದಿಂದ ಆಗಬೇಕು ಎಂದ ಅವರು ಬಹುಭಾಷಾ ಕಲಿಕೆಯಲ್ಲಿ ಮಗುವಿನ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆಗೊಳ ಪಡಿಸಿದರು.
ಪ್ರಾದೇಶಿಕ ಭಾಷೆಯನ್ನು ಕಲಿಸದ ಶಿಕ್ಷಣ ವ್ಯವಸ್ಥೆ ಮಗುವಿನ ಬಲ ಭಾಗದ ಮೆದುಳಿನ ಬೆಳವಣಿಗೆಗೆ ಪ್ರತಿಕೂಲವಾಗಿರುತ್ತದೆ ಎಂದರು. ದಕ್ಷಿಣ ಭಾರತದ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ಪ್ರಯತ್ನವನ್ನು ಖಂಡಿಸಿದ ಅವರು ಅದನ್ನು ಮೂರನೇ ಭಾಷೆಯಾಗಿ ಕಲಿಸುವುದನ್ನು ಸಹ ನಾವು ತಿರಸ್ಕರಿಸಬೇಕು ಎಂದರು.
ಖ್ಯಾತ ಶಿಕ್ಷಣ ತಜ್ಞ ಹಾಗೂ ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ ಅವರು ಮಾತನಾಡಿ, ದೇಶದಲ್ಲಿ 80ರ ದಶಕದ ಬಳಿಕ ಪ್ರಾದೇಸಿ ಭಾಷಾ ಮಾಧ್ಯಮ ಅವನತಿಯ ಹಂತದಲ್ಲಿದೆ. ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧವಿದೆ. ಆದರೆ ಸರಕಾರಗಳ ದೋಪೂರಿತ ಭಾಷಾ ನೀತಿಯಿಂದಾಗಿ ಇಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಶಾಲೆಗಳ ಕುರಿತಂತೆ ನಮ್ಮ ಆಡಳಿತಗಾರರ, ರಾಜಕಾರಣಿಗಳ ನಿರ್ಲಕ್ಷವೇ ಇಂದಿನ ದುಸ್ಥಿತಿಗೆ ಕಾರಣ ಎಂದರು.
ಇಂಗ್ಲೀಷ್ ಭಾಷೆಯ ಮೂಲಕ ಕನ್ನಡವನ್ನು ಉಳಿಸುವ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಡಾ.ರಾವ್, ಕನ್ನಡದ ಮೂಲಕವೇ ಕನ್ನಡವನ್ನು ಉಳಿಸಬೇಕು. 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಜಾರಿ ಗೊಳಿಸಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದರು.
ನಿವೃತ್ತ ಪ್ರಾಧ್ಯಾಪಕಿ ಹಾಗೂ ಕನ್ನಡ ಖ್ಯಾತನಾಮ ನಗೆ ಬರಹಗಾರ್ತಿ ಪ್ರೊ.ಭುವನೇಶ್ವರಿ ಹಡೆ ಮಾತನಾಡಿ, ಇಂದು ಸರಕಾರವೇ ಮುಂಚೂಣಿಗೆ ನಿಂತು ಇಂಗ್ಲೀಷ್ ಶಾಲೆಗಳಿಗೆ ಸರಿಸಮಾನವಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಬೆಳೆಸಿದರೆ ಮಾತ್ರ ರಾಜ್ಯದಲ್ಲಿ ಕನ್ನಡ ಶಾಲೆಗಳು, ಭಾಷೆಗಳು ಉಳಿದು ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಾಲೆಗಳ ಪರವಾಗಿ ಅಭಿಪ್ರಾಯ ಮಂಡಿಸಿದ ಬ್ರಹ್ಮಾವರ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಹಂದೆ, ಕನ್ನಡವನ್ನು ಚೆನ್ನಾಗಿ ಕಲಿಯಲು ಶಬ್ದಗಳು ಮಗುವಿನ ಗ್ರಹಿಕೆಗೆ ಸಿಗಬೇಕು. ಕಲಿಕೆಗೆ ವಾತಾವರಣ ಮುಖ್ಯವಾಗುತ್ತದೆ. ಭಾಷೆಯೊಂದು ಬದುಕುವುದು ಜನರ ಜೀವನಕ್ರಮದಲ್ಲಿ ಎಂದರು.
ಸಂವಾದ ಕಾರ್ಯಕ್ರಮವನ್ನು ಪ್ರೊ.ವರದೇಶ ಹಿರೆಗಂಗೆ ನಿರ್ವಹಿಸಿದರು. ಮಣಿಪಾಲ ವಿವಿ ಯುರೋಪಿಯನ್ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ನೀತಾ ಇನಾಂದಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ರೇವತಿ ನಾಡಿಗೇರ್ ಕಾರ್ಯಕ್ರಮ ನಿರೂಪಿಸಿದರು.







