ಸಂಘ ಪರಿವಾರದ ಮುಖಂಡರ ವಿರುದ್ಧದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ಮತ್ತೊಂದು ವಾರ ವಿಸ್ತರಣೆ

ಬೆಂಗಳೂರು, ಆ.28: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಕೋಮುಗಲಭೆಯಲ್ಲಿ ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮೃತದೇಹದ ಮೆರವಣಿಗೆ ವೇಳೆ ಗಲಭೆ ನಡೆಸಿದ ಆರೋಪ ಸಂಬಂಧ ಸತ್ಯಜಿತ್ ಸುರತ್ಕಲ್ ಸೇರಿ ಐವರು ಸಂಘ ಪರಿವಾರದ ಮುಖಂಡರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಮತ್ತೊಂದು ವಾರ ವಿಸ್ತರಿಸಿ ಹೈಕೋರ್ಟ್ ಸೋಮವಾರ ಆದೇಶಿಸಿತು.
ಶರತ್ ಮಡಿವಾಳ ಮೃತದೇಹವನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ಸಜಿಪದ ಕಂದೂರಿಯ ಅವರ ಮನೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವ ವೇಳೆ ಜುಲೈ 8ರಂದು ನಿಷೇಧಾಜ್ಞೆ ಉಲ್ಲಂಘಿಸಿ 2000 ಜನರನ್ನು ಸೇರಿಸಿ ಗಲಭೆ ನಡೆಸಿದ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಆರೋಪ ಸಂಬಂಧ ತಮ್ಮ ವಿರುದ್ಧ ಬಂಟ್ವಾಳ ನಗರ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ಸಂಘ ಪರಿವಾರದ ಮುಖಂಡರಾದ ಸತ್ಯಜಿತ್ ಸುರತ್ಕಲ್, ಹರೀಶ್ ಪೂಂಜಾ, ಮುರಳಿ ಕೃಷ್ಣ ಹಸಂತಡ್ಕ, ಶರಣ್ ಪಂಪ್‌ವೆಲ್, ಪ್ರದೀಪ್ ಕುಮಾರ್ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ಸಂಬಂಧ ಆ.18ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧದ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಈ ಮಧ್ಯಂತರ ಆದೇಶವನ್ನು ಮತ್ತೆ ಒಂದು ವಾರ ಕಾಲ ವಿಸ್ತರಿಸಿ ನ್ಯಾಯಪೀಠ ಸೋಮವಾರ ಆದೇಶಿಸಿತು.





